ಬಿಜೆಪಿ, ಆರ್ ಎಸ್ ಎಸ್ ನನ್ನ ಗುರುವಿದ್ದಂತೆ – ರಾಹುಲ್ ಗಾಂಧಿ
ಭಾರತೀಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಮೊದಲಿನಿಂದಲೂ ಬದ್ಧ ವೈರಿಗಳು. ಏಟಿಗೆ ಎದುರೇಟು ಎಂಬಂತೆ ಬೆಳೆದು ಬಂದ ಪಾರ್ಟಿಗಳಿವು. ಹಾಗೇ ಬಿಜೆಪಿಯ ಪರ ಒಲವಿಟ್ಟುಕೊಂಡಿರುವ ಆರ್ ಎಸ್ ಎಸ್ ಕೂಡ ಕಾಂಗ್ರೆಸ್ ಗೆ ಒಂದು ರೀತಿಯಲ್ಲಿ ವೈರಿಯೆಂದೇ ಹೇಳಬಹುದು. ಯಾವಾಗಲೂ ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ವಿರುದ್ಧ ಗುಡುಗುತ್ತಲೇ ಇರುತ್ತಾರೆ. ಆದರೆ ಇದೀಗ ವಿಚಿತ್ರವೆಂಬಂತೆ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆರ್ ಎಸ್ ಎಸ್ ನನ್ನ ಗುರುವಿದ್ದಂತೆ ಎಂದು ಹೇಳಿದ್ದಾರೆ.
ಅಲ್ಲದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಯಾವಾಗಲೂ ನಮ್ಮ ವಿರುದ್ಧವಾಗಿಯೇ ಇದೆ. ಅವುಗಳು ತಮ್ಮ ಹೇಳಿಕೆಗಳಿಂದ, ಕಾಂಗ್ರೆಸ್ ಅನ್ನು ಸದಾ ನಿಂದಿಸುವುದರ ಮೂಲಕ, ಕಾಂಗ್ರೆಸ್ ತನ್ನ ತತ್ವ- ಸಿದ್ಧಾಂತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿವೆ. ಹಾಗಾಗಿ ಬಿಜೆಪಿ ಮತ್ತು ಆರ್ ಎಸ್ ಎಸ್ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ದೆಹಲಿಯಲ್ಲಿಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಂತಹ ಸಂದರ್ಭದಲ್ಲಿ ಈ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತದೆ ಹಾಗೂ ಕೊರೊನಾ ಸೋಂಕು ಹರಡುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ ಬಿಜೆಪಿ ನಡೆಸುವ ರೋಡ್ ಶೋಗಳು, ಯಾತ್ರೆಗಳಿಂದ ಯಾವುದೇ ಕೊರೊನಾ ಹರಡೋದಿಲ್ವಾ ಎಂದು ಪ್ರಶ್ನಿಸಿದರು.
ಹಾಗೇ ಅವರು ನಮ್ಮ ವಿರುದ್ಧ ಏನೇ ಹೇಳಲಿ, ಅದು ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ನಾನು ಅವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ಅವರು ನನಗೆ ದಾರಿ ತೋರಿಸುತ್ತಿದ್ದಾರೆ. ಜೊತೆಗೆ ಏನು ಮಾಡಬಾರದು ಅನ್ನೋದರ ಬಗ್ಗೆಯೂ ತರಬೇತಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.