ನೀವು ರಾತ್ರಿ ಊಟ ಮಾಡುವುದಿಲ್ಲವೇ? ಎಚ್ಚರ!! ಈ ಸಮಸ್ಯೆ ಉಂಟಾಗಬಹುದು
ಕೆಲವರು ಹಸಿವಿಲ್ಲ ಎಂದು ರಾತ್ರಿ ಊಟ ಬಿಟ್ಟರೆ ಇನ್ನೂ ಕೆಲವರು ತೆಳ್ಳಗಾಗಲು, ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಮಾಡೋದಿಲ್ಲ. ಆದರೆ ನಿಮಗೆ ತಿಳಿದಿರಲಿಕ್ಕಿಲ್ಲ, ರಾತ್ರಿ ಊಟ ಬಿಡುವುದರಿಂದ ತೂಕ ಕಳೆದುಕೊಳ್ಳುವುದಿಲ್ಲ. ಬದಲಾಗಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆಯಂತೆ.
ಪ್ರತಿದಿನ ರಾತ್ರಿ ಊಟ ಮಾಡದೇ ಇರೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹಕ್ಕೆ ಬೇಕಾದ ಕ್ಯಾಲೋರಿಗಳು ಸಿಗುವುದಿಲ್ಲ ಮತ್ತು ದೇಹದ ಶಕ್ತಿ ಕ್ರಮೇಣ ಕುಗ್ಗುತ್ತದೆ. ಕ್ಯಾಲೋರಿಗಳ ಕೊರತೆಯಿಂದ ನಿಮಗೆ ದಣಿವು, ಆಯಾಸ ಉಂಟಾಗಬಹುದು.
ಇನ್ನೂ, ನಿಮ್ಮ ಹೊಟ್ಟೆ ತುಂಬಿದಾಗ, ಲೆಪ್ಟಿನ್ ಹಾರ್ಮೋನ್ ನಿಮ್ಮ ದೇಹಕ್ಕೆ ಹೊಟ್ಟೆ ತುಂಬಿದೆ, ತಿನ್ನುವುದನ್ನು ನಿಲ್ಲಿಸಲು ಸೂಚನೆ ನೀಡುತ್ತದೆ. ಗ್ರೆಲಿನ್ ಹಾರ್ಮೋನ್ ನಿಮಗೆ ಹಸಿವಿನ ಬಗ್ಗೆ ತಿಳಿಸುತ್ತದೆ. ನೀವು ಹಸಿವಿನ ಈ ಸೂಚನೆಗಳನ್ನು ನಿರ್ಲಕ್ಷಿಸಿದರೆ, ಈ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆಗ ನೀವು ಯಾವ ಸಮಯದಲ್ಲಿ ಆಹಾರ ಸೇವಿಸಬೇಕು ಎಂಬ ಸರಿಯಾದ ಸೂಚನೆ ಇಲ್ಲದೆ, ಹಸಿವು ನಿಂತು ಹೋಗುತ್ತದೆ.
ಊಟ ಮಾಡದೇ ಇರುವುದು ನಿಮ್ಮ ನಿದ್ರೆಯ ಚಕ್ರದ ಮೇಲೆ ಕೂಡ ಪರಿಣಾಮ ಬೀರಬಹುದು. ಇದರಿಂದ ನೀವು ಸಮಯಕ್ಕೆ ಸರಿಯಾಗಿ ಮಲಗಲು ಸಾಧ್ಯವಾಗುವುದಿಲ್ಲ. ನಿದ್ರೆ ಬಾರದೇ ಇರಬಹುದು. ಅಲ್ಲದೆ, ಈ ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿ, ಮನಸ್ಥಿತಿ, ಶಕ್ತಿ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಕೂಡ ಪರಿಣಾಮ ಬೀರಬಹುದು.
ಇಷ್ಟು ಮಾತ್ರವಲ್ಲದೆ, ನೀವು ರಾತ್ರಿಯ ಊಟವನ್ನು ಮಾಡದೇ ಇದ್ದರೆ ವಾಕರಿಕೆ, ಅತಿಸಾರ ಅಥವಾ ಮಲಬದ್ಧತೆ ಉಂಟಾಗಬಹುದು. ಅಲ್ಲದೆ, ರಾತ್ರಿ ಊಟ ಮಾಡದೇ ಇರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ದೇಹದ ಹಸಿವಿನ ಚಕ್ರವೂ ಹಾಳಾಗುತ್ತದೆ ಮತ್ತು ನೀವು ಅನೇಕ ರೀತಿಯ ಕಾಯಿಲೆಗೆ ತುತ್ತಾಗಬಹುದು.
ಹಾಗೂ ಇದರಿಂದ ಅನೋರೆಕ್ಷಿಯಾ, ಬುಲಿಮಿಯಾ ಅಥವಾ ಆರ್ಥೋರೆಕ್ಸಿಯಾದಂತಹ ರೋಗಗಳು ಉಂಟಾಗಬಹುದು. ಒಮ್ಮೆ ರಾತ್ರಿಯ ಊಟ ಬಿಟ್ಟರೆ ನಂತರ ನಿಮಗೆ ಹಸಿವಾದಾಗ ನೀವು ರಾತ್ರಿ ತಡವಾಗಿ ಊಟ ಮಾಡಲು ಪ್ರಾರಂಭಿಸುತ್ತೀರಿ. ಇದು ಒತ್ತಡದ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗಲು ಆರಂಭವಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ರಾತ್ರಿ ಊಟ ಮಾಡದೇ ಇದ್ದರೆ, ಹಾಗಾಗಿ ಪ್ರತಿದಿನ ರಾತ್ರಿ ತಪ್ಪದೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.