Salary Hike: ಉದ್ಯೋಗಿಗಳಿಗೆ 20% ವೇತನ ಹೆಚ್ಚಳ
ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಸ್ಮಸ್ ಹಬ್ಬದ ಆಫರ್ ಆಗಿ ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)(Tata Consultancy Services) ತನ್ನ ಉದ್ಯೋಗಿಗಳಿಗೆ (Employees)ಭಾರಿ ಬಂಪರ್ ಸಿಹಿ ಸುದ್ದಿ ನೀಡಿದ್ದು, ನೌಕರರಿಗೆ ವೇತನದಲ್ಲಿ ಏರಿಕೆ ಮಾಡಲಾಗಿದೆ.
ಟಿಸಿಎಸ್ ಏಕೀಕೃತ ಸಂಸ್ಥೆಯಲ್ಲಿ 6 ಲಕ್ಷ ಉದ್ಯೋಗಿಗಳಿದ್ದು, ಹೊಸ ವರ್ಷಕ್ಕೆ ಕಂಪನಿಯಿಂದ ಉತ್ತಮ ಉಡುಗೊರೆ ಲಭ್ಯವಾಗಿದೆ ಎನ್ನಬಹುದು. ಸಿಬ್ಬಂದಿಗಳಿಗೆ ವೇತನ ಹೆಚ್ಚಿಸುವುದಾಗಿ ಈ ವರ್ಷ ಅಕ್ಟೋಬರ್‌ನಲ್ಲಿ ಘೋಷಿಸಿದ ಬೆನ್ನಲ್ಲೇ ಇದೀಗ, ಉದ್ಯೋಗಿಗಳಿಗೆ ಕ್ರಿಸ್‌ಮಸ್ ಆಫರ್- 20% ವೇತನ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಟಿಸಿಎಸ್ ತನ್ನ 70% ಉದ್ಯೋಗಿಗಳಿಗೆ ಕ್ರಿಸ್‌ಮಸ್ ಆಫರ್ ನೀಡಿದ್ದು, 20% ವೇತನ ಹೆಚ್ಚಳವನ್ನು ಮಾಡಿದೆ. ಹಾಗೆಯೇ ಇನ್ನುಳಿದ ಉದ್ಯೋಗಿಗಳಿಗೆ ಅವರ ಕಾರ್ಯಕ್ಷಮತೆಯ ಅನುಸಾರ ವೇತನ ಹೆಚ್ಚಳವನ್ನು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ ಮತ್ತು ಇನ್ಫೋಸಿಸ್ ಎಲ್ಲಾ ತಮ್ಮ ಉದ್ಯೋಗಿಗಳಿಗೆ ವೇರಿಯಬಲ್ ವೇತನವನ್ನು ಇಳಿಕೆ ಮಾಡಿದ್ದವು. ವಿಪ್ರೋದಲ್ಲಿ ಪ್ರವೇಶ ಮಟ್ಟದ ಉದ್ಯೋಗಿಗಳು ಹಿರಿಯ ಸಿಬ್ಬಂದಿ ಪಡೆಯುವ ವೇರಿಯಬಲ್ ಸಂಭಾವನೆಯ 70% ಅನ್ನು ಮಾತ್ರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ ಐಟಿ ಕಂಪನಿ ಇನ್ಫೋಸಿಸ್ ಕೂಡ ಇದೇ ಮಾರ್ಗವನ್ನು ಅನುಸರಿಸಿತ್ತು. ಒಟ್ಟು ಉದ್ಯೋಗಿ ಸಂಭಾವನೆಯ ಮೇಲಿನ ಮಿತಿಯನ್ನು ಜೂನ್ ತ್ರೈಮಾಸಿಕದಲ್ಲಿ ಸರಾಸರಿ ಶೇ. 70ರಷ್ಟು ವೇರಿಯಬಲ್ ಪೇಯನ್ನು ನಿಗದಿ ಮಾಡಲಾಗಿದೆ.
ಟಿಸಿಎಸ್ ದೇಶದ ಪ್ರಸಿದ್ಧ ಸಂಸ್ಥೆಯಾಗಿ ಬೆಳೆದಿದ್ದು, ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 8% ರಷ್ಟು ಏರಿಕೆಯಾಗಿದ್ದು, 10,000 ಕೋಟಿಗಳಿಗಿಂತ ಹೆಚ್ಚು ಲಾಭ ಗಳಿಸಿದೆ. ಭಾರಿ ಲಾಭ ಗಳಿಕೆಯಲ್ಲಿರುವ ಕಂಪನಿ ಸದ್ಯ ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವನ್ನು ನೀಡಲು ಕೂಡ ಯೋಜನೆ ಮಾಡಿದೆ.
ಇನ್ನೂ ಟಿಸಿಎಸ್ ಕಳೆದ ಕೆಲ ತಿಂಗಳಲ್ಲಿ ಭಾರಿ ನೇಮಕಾತಿಯನ್ನು ಕೂಡ ಮಾಡಿಕೊಂಡಿದ್ದು, ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ, 20,000 ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ 2022ರ ಒಟ್ಟು ಹೊಸ ನೇಮಕಗಳ ಸಂಖ್ಯೆ 35,000 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಸಂಸ್ಥೆಯು 40,000 ಹೊಸ ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಘೋಷಣೆ ಮಾಡಿತ್ತು.
ಟಿಸಿಎಸ್ ಕೆಲವು ಉದ್ಯೋಗಿಗಳಿಗೆ ಜೂನ್ ವೇರಿಯಬಲ್ ಪೇ ಪಾವತಿಯನ್ನು ಒಂದು ತಿಂಗಳ ಕಾಲ ತಡವಾಗಿ ನೀಡಿದೆ ಎಂಬ ಮಾಹಿತಿ ಕೇಳಿ ಬರುತ್ತಿತ್ತು. ಈ ವರದಿಯ ನಡುವೆ ಆಗಸ್ಟ್‌ನಲ್ಲಿ ತನ್ನ 4,00,000 ಉದ್ಯೋಗಿಗಳಿಗೆ ಶೇ. 100ರಷ್ಟು ವೇರಿಯಬಲ್ ಪೇಯನ್ನು ಪಾವತಿ ಮಾಡುವ ಭರವಸೆ ನೀಡಲಾಗಿತ್ತು. ಸದ್ಯ ಟಿಸಿಎಸ್ ಉದ್ಯೋಗಿಗಳಿಗೆ 100% ವೇರಿಯಬಲ್ ಪರಿಹಾರ ಯೋಜನೆಯನ್ನು ಜಾರಿಗೆ ತಂದಿದೆ.
ಇನ್ನೂ ಕೂಡ 10,000-12,000 ಹೊಸ ಉದ್ಯೋಗಿಗಳನ್ನು ಟಿಸಿಎಸ್ ನೇಮಿಸಿಕೊಳ್ಳಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. “ನಾವು ಆನ್‌ಬೋರ್ಡಿಂಗ್ ಫ್ರೆಶರ್‌ಗಳನ್ನು ಪ್ರಾರಂಭಿಸಿದ್ದು ಜೊತೆಗೆ ನಮ್ಮ ನೇಮಕಾತಿಯನ್ನು ಜಾಗತಿಕವಾಗಿ ಕ್ಯೂ 2 ನಲ್ಲಿ ಹೆಚ್ಚಿಸಿದ್ದೇವೆ” ಎಂದು ಮಾನವ ಸಂಪನ್ಮೂಲ ಜಾಗತಿಕ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಈ ಹಿಂದೆ ಹೇಳಿಕೊಂಡಿದ್ದರು. ಐಟಿ ವಲಯದಲ್ಲಿ ಆಟ್ರಿಷನ್ ದರ ಇಳಿಮುಖವಾಗಿರುವುದರಿಂದ ನೇಮಕಾತಿ ಕೂಡ ಕುಂಠಿತ ವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಕಂಪನಿಯ ತ್ರೈಮಾಸಿಕ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸಿದ ಬಳಿಕ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕರ್ ಸೋಮವಾರ ಬಂಪರ್ ಆಫರ್ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ 70% ಉದ್ಯೋಗಿಗಳಿಗೆ ಎಲ್ಲಾ ವೇರಿಯೇಬಲ್‌ಗಳನ್ನು ಪಾವತಿಸಲಿದೆ ಎಂಬ ಮಾಹಿತಿಯನ್ನು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.