ಮೂತ್ರ ವಿಸರ್ಜನೆಗೆಂದು ಕಾಡೊಳಗೆ ಹೋದ ಪತ್ನಿ | ಹೆಂಡತಿಯನ್ನು ಬಿಟ್ಟು ಹೋದ ಪತಿ| ಹೆಂಡತಿ ಮನೆ ಸೇರಿದ್ದಾದರೂ ಹೇಗೆ?
ಮರೆವು ಕೆಲವರ ಪಾಲಿಗೆ ವರದಾನವಾದರೆ ಮತ್ತೆ ಕೆಲವರ ಪಾಲಿಗೆ ಶಾಪವಾಗಿ ಪರಿಣಮಿಸುತ್ತದೆ. ನಾವು ಯಾವುದೇ ಕೆಲಸ ಮಾಡುವಾಗ ಮರೆವು ಅನ್ನುವ ವಿಚಾರ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮರೆವು ಎಲ್ಲರನ್ನು ಕಾಡುತ್ತದೆ. ಹೋದಲ್ಲಿ ಬಂದಲ್ಲಿ.. ಕೊಳ್ಳಬೇಕಾದ ವಸ್ತುಗಳು, ಆಫೀಸ್ ಗೆ ಹೊರಡುವ ತರಾತುರಿಯಲ್ಲಿ ಬೈಕ್ ಕೀ, ಇಲ್ಲವೇ ವ್ಯಾಲೆಟ್ , ಯಾರಾದ್ರು ಸಂಬಂಧಿಕರು ಸಿಕ್ಕರೆ ಅವರ ಹೆಸರು ಹೀಗೆ ಹೇಳುತ್ತಾ ಹೋದರೆ ಮರೆವಿನ ಪಟ್ಟಿಯೇ ಮುಗಿಯದು. ಇದರ ನಡುವೆ ಕೆಲವೊಮ್ಮೆ ಕಹಿ ನೆನಪು ಅತಿಯಾಗಿ ಕಾಡಿದಾಗ ಮರೆವು ಅನಿವಾರ್ಯವಾಗಿ ಪರಿಣಮಿಸುತ್ತದೆ.
ಹೀಗೆ ಮರೆಗುಳಿ ಮಹಾಶಯನೊಬ್ಬ ಪ್ರವಾಸದ ವೇಳೆ ತನ್ನ ಪತ್ನಿಯನ್ನು ದಾರಿ ಮಧ್ಯೆ ಬಿಟ್ಟು ಬಂದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಥೈಲ್ಯಾಂಡ್ನಲ್ಲಿ 55 ವರ್ಷದ ಪತಿರಾಯ ಪ್ರವಾಸದ ಸಂದರ್ಭ ತನ್ನ ಪತ್ನಿಯನ್ನೇ ಮರೆತು, ನಡು ದಾರಿಯಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ. ಹೀಗಾಗಿ, ಪತ್ನಿ ಕತ್ತಲಲ್ಲೇ ಬೆಳಕು ಮೂಡದ ಹೊತ್ತಲ್ಲದ ಹೊತ್ತಿನಲ್ಲಿ ಬರೋಬ್ಬರಿ 20 ಕಿಲೋಮೀಟರ್ ದೂರ ನಡೆದುಕೊಂಡು ಬಂದಿರುವ ಸಂಗತಿ ನಡೆದಿದ್ದು ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.
ಥೈಲ್ಯಾಂಡ್ನ ಬೂಂಟೊಮ್ ಚೈಮೂನ್ (55) ಮತ್ತು ಅವರ ಪತ್ನಿ ಅಮ್ನುವೇ ಚೈಮೂನ್ (49) ಇಬ್ಬರೂ ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದಾರೆ. ಇಬ್ಬರಿಗೂ ಕೂಡ ರಜೆ ಇದ್ದಿದ್ದರಿಂದ ಅಮ್ನುವೇ ಅವರ ತವರು ಮನೆ ಮಹಾ ಸರಖಂ ಎಂಬ ಪ್ರಾಂತ್ಯಕ್ಕೆ ಇಬ್ಬರೇ ಕಾರಿನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಅವರಿದ್ದ ಮನೆಯಿಂದ ತಲುಪಬೇಕಾದ ಮನೆ ತುಂಬ ದೂರವಿದ್ದು ಪರಸ್ಪರ ಮಾತನಾಡುತ್ತ ಬೂಂಟೊಮ್ ಡ್ರೈವಿಂಗ್ ಮಾಡಿದರೆ ಅಮ್ನುವೇ ಪತಿಯೊಂದಿಗೆ ಹರಟೆ ಹೊಡೆಯುತ್ತ ಪ್ರಯಾಣ ಮಾಡುತ್ತಿದ್ದರು. ಈ ಸೂಪರ್ ಜೋಡಿಗೆ ಮದುವೆಯಾಗಿ 27ವರ್ಷಗಳಾಗಿದ್ದು, 26 ವರ್ಷದ ಮಗ ಇದ್ದಾನೆ.
ಮುಂಜಾನೆ 3ಗಂಟೆ ಹೊತ್ತಿಗೆ ಬೂಂಟೊಮ್ಗೆ ಮೂತ್ರಕ್ಕೆ ಹೋಗಿದ್ದು, ಅವರು ಹೊರಟಿದ್ದ ರಸ್ತೆ ಕಾಡಿನ ಮಧ್ಯೆ ಇದ್ದುದರಿಂದ ಅಲ್ಲೆಲ್ಲೂ ಸಾರ್ವಜನಿಕ ಶೌಚಗೃಹ ಇರಲಿಲ್ಲ. ಪತಿ ಕಾರಿನಿಂದ ಇಳಿಯುತ್ತಿದ್ದಂತೆ ಅಮ್ನುವೇ ಕೂಡ ಇಳಿದು, ಅಲ್ಲೇ ಸ್ವಲ್ಪ ದೂರದಲ್ಲಿ ಕಾಡಿನ ಮಧ್ಯೆ ಮೂತ್ರವಿಸರ್ಜನೆಗಾಗಿ ಹೋಗಿದ್ದಾರೆ. ಇತ್ತ ವಾಪಸ್ ಬಂದ ಬೂಂಟೊಮ್, ಪತ್ನಿ ಇದ್ದಾಳೆ ಎಂಬ ವಿಚಾರವನ್ನೇ ಮರೆತು ಬಿಟ್ಟಿದ್ದು ಡ್ರೈವ್ ಮಾಡಿಕೊಂಡು ಪ್ರಯಾಣ ಆರಂಭಿಸಿದ್ದಾರೆ.
ಅತ್ತ ಕಾರಿದ್ದ ಜಾಗಕ್ಕೆ ಮರಳಿದ ಅಮ್ನುವೇ ಕಾರು ಹಾಗೂ ಪತಿಯನ್ನು ಕಾಣದೆ ಗಾಬರಿಗೊಂಡಿದ್ದಾರೆ.ತನ್ನ ಪತಿ ತನ್ನನ್ನು ಬಿಟ್ಟು ಹೋಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಕರೆ ಮಾಡಲು ಯೋಜನೆ ಹಾಕುವಾಗ ನೆನಪಾಗಿದ್ದು ಕಾರಿನಿಂದ ಇಳಿದು ಮೂತ್ರವಿಸರ್ಜನೆಗೆ ಹೋಗುವಾಗ ತನ್ನ ಮೊಬೈಲ್ನ್ನು ಬ್ಯಾಗ್ನಲ್ಲಿಟ್ಟು ಬಂದ ವಿಚಾರ!!. ಬ್ಯಾಗ್ ಅನ್ನು ಕಾರಿನ ಹಿಂಬದಿ ಸೀಟ್ನಲ್ಲಿಯೇ ಬಿಟ್ಟು ಹೋಗಿದ್ದರಿಂದ ಬೇರೆ ಅನ್ಯ ಮಾರ್ಗ ಕಾಣದೆ ಆ ತಡರಾತ್ರಿ ಮೂರು ಗಂಟೆ ಸಮಯದ ಕತ್ತಲಲ್ಲೇ ನಡೆಯಲು ಆರಂಭಿಸಿದ್ದಾರೆ.
ಸುಮಾರು 20 ಕಿಲೋಮೀಟರ್ ದೂರ ಹಾಗೇ ನಡೆಯುತ್ತ ಹೋಗಿ ಮುಂಜಾನೆ 5ಗಂಟೆ ಹೊತ್ತಿಗೆ ಕಬಿನ್ ಬುರಿ ಎಂಬ ಜಿಲ್ಲೆಯನ್ನು ತಲುಪಿಕೊಂಡು, ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಅಮ್ನುವೇ ಬಳಿ ಪತಿಗೆ ಕರೆ ಮಾಡಲು ತಿಳಿಸಿದಾಗ ಆಕೆಗೆ ಆತನ ಫೋನ್ನಂಬರ್ ಕೂಡ ಸರಿಯಾಗಿ ನೆನಪಿರಲಿಲ್ಲ.
ಈ ಕಹಾನಿ ಕೇಳಿದಾಗ ಇಬ್ಬರು ಸರಿಯಾದ ಜೋಡಿ ಅನಿಸದೇ ಇರದು. ಏಕೆಂದರೆ ಇಬ್ಬರು ಕೂಡ ಮರೆವಿನ ವಿಷಯದಲ್ಲಿ ಇಬ್ಬರು ಸಮಾನರೆ ಸರಿ!!.. ಕೊನೆಗೆ ತನ್ನ ನಂಬರ್ ಗೆ ಅಮ್ನುವೇ ಕರೆ ಮಾಡಿದ್ದು, ಹೇಗೂ ಬ್ಯಾಗ್ ಕಾರಿನಲ್ಲಿಯೇ ಇರುವುದರಿಂದ ಫೋನ್ ರಿಂಗ್ ಆದಾಗ ಪತಿ ಕರೆ ಸ್ವೀಕರಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಸರಿ ಸುಮಾರು 20 ಬಾರಿ ಕರೆ ಮಾಡಿದರೂ ಒಮ್ಮೆಯೂ ಕೂಡ ಬೂಂಟೊಮ್ ಕರೆಯನ್ನು ಸ್ವೀಕರಿಸಿಲ್ಲ. ಇನ್ನೂ ಈ ಮರೆಗುಳಿ ಮಹಾಶಯನಿಗೆ ಎಷ್ಟೋ ದೂರ ಕ್ರಮಿಸಿದರು ಕೂಡ ಇಡೀ ರಸ್ತೆ ಪ್ರಯಾಣದಲ್ಲಿ ಒಮ್ಮೆಯೂ ಹೆಂಡತಿ ಬಗ್ಗೆ ತಲೆಕೆಡಿಸಿಕೊಳ್ಳುವುದು ಇರಲಿ.. ಒಮ್ಮೆಯೂ ಕೂಡ ಆಕೆಯ ಬಗ್ಗೆ ಯೋಚನೆ ಕೂಡ ಮಾಡಿಲ್ಲ ಎಂದರೆ ನಿಜಕ್ಕೂ ವಿಸ್ಮಯವಾಗುತ್ತದೆ.
ಪತಿ ಸರಿ ಸುಮಾರು 150 ಕಿಮೀ ದೂರ ಕಾರು ಓಡಿಸಿ ಕೊರಾಟ್ ಪ್ರಾಂತ್ಯ ತಲುಪಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಪತಿ ಕರೆ ಸ್ವೀಕರಿಸದೆ ಇದ್ದಾಗ ಪೊಲೀಸರೇ ಏನೇನೋ ಪ್ರಯತ್ನ ಮಾಡಿ ಬೆಳಗ್ಗೆ 8ಗಂಟೆ ಹೊತ್ತಿಗೆ ಬೂಂಟೊಮ್ನನ್ನು ಸಂಪರ್ಕಿಸಿದ್ದಾರೆ. ಮತ್ತೊಂದು ಅಚ್ಚರಿ ವಿಷಯ ಏನಪ್ಪಾ ಅಂದ್ರೆ ಪೊಲೀಸರು ತಿಳಿಸಿದಾಗಲೇ ಆತನಿಗೆ ತನ್ನ ಪತ್ನಿಯನ್ನು ಬಿಟ್ಟು ಬಂದಿರುವ ವಿಚಾರ ತಿಳಿದು ಬಂದಿದ್ದು!!. ಜಗತ್ತಿನಲ್ಲಿ ಈ ರೀತಿಯ ಮನುಷ್ಯರು ಕೂಡ ಇದ್ದಾರಾ??? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಕೊನೆಗೆ ಬೂಂಟೊಮ್ ಅವರು ವಾಪಸ್ ಬಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದು, ಪತ್ನಿಯ ಬಳಿ ಕ್ಷಮೆ ಯಾಚಿಸಿದ್ದಾರೆ. ನನಗೇ ನಾಚಿಕೆಯಾಗುತ್ತಿದೆ ಎಂದು ಪಶ್ಚಾತ್ತಾಪ ಕೂಡ ಪಟ್ಟಿದ್ದಾರೆ. ‘ನೀನು ಹಿಂದಿನ ಸೀಟ್ನಲ್ಲಿ ನಿದ್ರಿಸುತ್ತಿದ್ದೀಯಾ ಎಂದುಕೊಂಡಿದ್ದಾಗಿ ಪತಿ ಹೇಳಿದ್ದು ಆದರೆ ಅಮ್ನುವೇ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಾರು ಏರಿದ್ದಾರೆ.