ಹೊಸ ವರ್ಷಾಚರಣೆಗೆ ಪಬ್, ಪಿಜಿ,ಬಾರ್& ರೆಸ್ಟೋರೆಂಟ್ ಮಾಲೀಕರಿಗೆ ಮಾರ್ಗಸೂಚಿ ಪ್ರಕಟ!

ಹೊಸ ವರ್ಷಕ್ಕೆ ಪಿಜಿ, ಬಾರ್ & ರೆಸ್ಟೋರೆಂಟ್, ಪಬ್ ಮಾಲೀಕರಿಗೆ ಮಾರ್ಗಸೂಚಿ ಪ್ರಕಟವಾಗಿದೆ. ಹೊಸ ವರ್ಷ ಹಿನ್ನೆಲೆ ಪಬ್‌ ಅಂಡ್ ರೆಸ್ಟೋರೆಂಟ್ (Pub And Restaurants), ಪಿಜಿ ಮಾಲೀಕರಿಗೆ (PG Owners) ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.

ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಮತ್ತು ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ​ ಜೊತೆ ಪೊಲೀಸ್ ಇನ್ಸ್​ಪೆಕ್ಟರ್ (Police Inspector) ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೈಗೊಳ್ಳಬೇಕಾದ‌ ಮುಂಜಾಗ್ರತ ಕ್ರಮಗಳ ಕುರಿತಾಗಿ ಬಗ್ಗೆ ನಿರ್ಣಯ ಮಾಡಲಾಗಿದೆ.

ಠಾಣಾ ಮಟ್ಟದಲ್ಲಿ ಸಭೆ ನಡೆಸಿ ಹಲವು ಅಂಶಗಳ ನಿರ್ದೇಶನ ಪಾಲಿಸುವಂತೆ ಸೂಚನೆ‌ ನೀಡಲಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ತಪ್ಪಿದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ 2018ರ ಅಡಿ ಕ್ರಮ ಕೈಗೊಳ್ಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಪಿಜಿ ಮಾಲೀಕರು ಪಾಲಿಸಬೇಕಾದ ಸೂಚನೆಗಳು ಹೀಗಿವೆ:

ದಿನಾಂಕ 31/12/2022ರಂದು ಹೊಸ ವರ್ಷದ ಪ್ರಯುಕ್ತ ಆ ವೇಳೆಗೆ ಪಿಜಿಯಿಂದ ಕ್ಯಾಬ್​ನಲ್ಲಿ ಹೊರಗಡೆ ಹೋಗುವವರ ಹಾಗೂ ಒಳಗಡೆ ಬರುವವರ ಮಾಹಿತಿ ಹಾಗೂ ಕ್ಯಾಬ್ ಅಥವಾ ವಾಹನಗಳ ಮಾಹಿತಿ ಕಲೆ ಹಾಕಲು ಪಿಜಿಗಳಲ್ಲಿ ಖಾಯಂ ಆಗಿ ಸೆಕ್ಯೂರಿಟಿ ಗಾರ್ಡ್​ಗಳನ್ನು ನಿಯೋಜಿಸಬೇಕಾಗಿದೆ.

ದಿನಾಂಕ 31/12/2022ರಂದು ಹೊಸ ವರ್ಷದ ಪ್ರಯುಕ್ತ ಹೊಸಬರು ಮತ್ತು ಅಪರಿಚಿತರನ್ನು ಪಿಜಿಯೊಳಗೆ ಸೇರಿಸಿಕೊಳ್ಳಬಾರದು. ಪಿಜಿ ಮಾಲೀಕರು ದಿನಾಂಕ 31/12/2022ರಂದು ಸ್ಥಳದಲ್ಲಿಯೇ ಇರಬೇಕು.

ತಮ್ಮ ಪಿಜಿಗಳ ಟೆರೇಸ್ ಮೇಲೆ ಹೊಸ ವರ್ಷದ ಪಾರ್ಟಿ ಮಾಡಿ ಕುಡಿಯುವರರ ಮಾಹಿತಿ ಸಂಗ್ರಹಿಸಲಾಗುತ್ತದೆ. ಪಿಜಿಯಲ್ಲಿರುವವರ ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಸಮಯ ಮಾಹಿತಿ ಸಂಗ್ರಹಿಸಲಾಗುತ್ತದೆ.

ದಿನಾಂಕ 31/12/2022ರಂದು ಪಿಜಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು. ಮಹಿಳಾ ಪಿಜಿಗಳಿಗೆ ಶುಭಕೋರಲು ಆ ವೇಳೆಯಲ್ಲಿ ಬರುವ ಪುರುಷರಿಗೆ ಅವಕಾಶ ನೀಡಬಾರದು.

ಯಾವುದೇ ಅನುಮಾನ ಕಂಡು ಬಂದರು ಕೂಡ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದು. ಪಿಜಿಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್​ಗಳನ್ನು ಕಟ್ ಮಾಡಬಾರದು.

ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಪಿಜಿ ಮಾಲೀಕರು ಹೊಣೆ ಆಗಲಿದ್ದಾರೆ. ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಪರವಾನಿಗೆ ರದ್ದುಪಡಿಸಲು ಬಿಬಿಎಂಪಿಗೆ ವರದಿ ಸಲ್ಲಿಸಲಾಗುವುದು.

ರೆಸ್ಟೋರೆಂಟ್ ಮತ್ತು ಪಬ್​ಗಳಿಗೆ ನೀಡಿರುವ ಸೂಚನೆಗಳು

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪಬ್, ಬಾರ್ ಆಂಡ್ ರೆಸ್ಟೋರೆಂಟ್​ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು.ಕಾರ್ಯಕ್ರಮ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.

ಗ್ರಾಹಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ರಚಿಸಬೇಕು. ಪ್ರವೇಶ ದ್ವಾರದಲ್ಲಿ ಹೆಚ್​ಹೆಚ್​ಎಂಡಿ ಮೂಲಕ ಪರಿಶೀಲಿಸಬೇಕು.ಗ್ರಾಹಕರ ಬ್ಯಾಗ್​ ಚೆಕ್ ಮಾಡಿ, ಸ್ಪೋಟಕ, ಮಾದಕ ದ್ರವ್ಯ, ಗಾಂಜಾ ಸೇರಿದಂತೆ ಅಪಾಯಕಾರಿ ವಸ್ತುಗಳು ಇಲ್ಲದಿರೋದನ್ನು ಖಚಿತಪಡಿಸಿಕೊಳ್ಳುವುದು.

ಹೆಚ್ಚಾಗಿ ಮದ್ಯಪಾನ ಮಾಡಿದವರಿಗೆ ಸುಧಾರಿಸಿಕೊಳ್ಳಲು ಐಸ್​ಲ್ಯಾಂಡ್​ ಸ್ಥಳ ಆಯೋಜಿಸುವುದು. ಬಾರ್ & ರೆಸ್ಟೋರೆಂಟ್​ಗಳಲ್ಲಿ 18 ವರ್ಷಕ್ಕಿಂತ ಒಳಗಿನವರಿಗೆ ಪ್ರವೇಶ ನೀಡಬಾರದು.

ಕೋವಿಡ್-19 ಸಂಬಂಧಪಟ್ಟಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು.ಅತಿಯಾಗಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ ಮಹಿಳೆಯರನ್ನು ಮಹಿಳಾ ಬೌನ್ಸರ್​ಗಳ ಮೂಲಕ ಅವರ ವಾಸಸ್ಥಾನಕ್ಕೆ ತಲುಪಿಸಬೇಕು.

ಈ ಸಮಯದಲ್ಲಿ ಮಹಿಳಾ ಗ್ರಾಹಕರು ಪ್ರಯಾಣಿಸುವ ವಾಹನದ ಸಂಖ್ಯೆ ಮತ್ತು ಚಾಲಕನ ಫೋಟೋ ಸಂಗ್ರಹಿಸಿಕೊಳ್ಳುವುದು. ಮಹಿಳಾ ಗ್ರಾಹಕರು ಅತಿಯಾಗಿ ಮದ್ಯ ಸೇವಿಸಿ ತಮ್ಮ ಸಮತೋಲನ ಕಳೆದುಕೊಳ್ಳುವ ಸಂಭವ ಇರುತ್ತದೆ. ಹೀಗಾಗಿ, ಮಹಿಳಾ ಗ್ರಾಹಕರ ಭದ್ರತೆ ಮತ್ತು ಸುರಕ್ಷತೆಗಾಗಿ ಮಹಿಳಾ ಬೌನ್ಸರ್​​ಗಳನ್ನು ನೇಮಿಸಿಕೊಳ್ಳಬೇಕು.

ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ರೀತಿಯ ಅಕ್ರಮ/ಅನೈತಿಕ ಚಟುವಟಿಕೆಗಳು, ಮಹಿಳೆ ಮೇಲೆ ದೌರ್ಜನ್ಯ ಮತ್ತು ಇತರೆ ಅಪರಾಧಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.

ಮದ್ಯದಂಗಡಿ ಒಳಗೆ, ಹೊರಗೆ ಮತ್ತು ಸುತ್ತಲಿನ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವುದು. ಮದ್ಯದಂಗಡಿ ಪರಿಸರದಲ್ಲಿ ಅಪರಾಧ ನಡೆದಲ್ಲಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದು.

ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳುವುದು. ಕಾರ್ಯಕ್ರಮ ಆಯೋಜಕರೇ ತಮ್ಮ ಗ್ರಾಹಕರ ರಕ್ಷಣೆ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವುದು.

ಮದ್ಯದಂಗಡಿ, ಬಾರ್​​, ರೆಸ್ಟೋರೆಂಟ್​ಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡೋದು ಮತ್ತು ಸಂಚಾರಿ ಪೊಲೀಸರ ಅನುಮತಿ ಪಡೆಯಬೇಕು. ಮೇಲೆ ಸೂಚಿಸಿದ ನಿಯಮಗಳನ್ನೂ ಪಾಲನೆ ಮಾಡಿ ಹೊಸ ವರ್ಷಾಚರಣೆ ನಡೆಸಲು ಸೂಚಿಸಲಾಗಿದೆ.

Leave A Reply

Your email address will not be published.