ಪೋಷಕರೇ ಗಮನಿಸಿ: ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆತ್ತವರು ಕಟ್ಟಬೇಕು ಭಾರೀ ದಂಡ!!! ಕಾಲೇಜಿಗೆ ವಾಹನ ತಂದರೆ ಪ್ರಾಂಶುಪಾಲರು ಆಗಲಿದ್ದಾರೆ ಹೊಣೆ!!
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇದೀಗ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ಇನ್ನು ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆತ್ತವರು ಭಾರಿ ದಂಡ ತೆರಬೇಕಾಗುತ್ತದೆ. ಅಷ್ಟೇ ಅಲ್ಲದೆ, ಕಾಲೇಜಿಗೆ ಅಪ್ರಾಪ್ತರು ವಾಹನ ತಂದರೆ ಪ್ರಾಂಶುಪಾಲರು ಹೊಣೆಯಾಗಲಿದ್ದಾರೆ. ಅಪ್ರಾಪ್ತರ ಕೈಗೆ ವಾಹನವನ್ನು ನೀಡಿದರೆ ಪೋಷಕರು ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಶಿವಮೊಗ್ಗ ಆರ್.ಟಿ.ಒ ಅಧಿಕಾರಿ ಗಂಗಾಧರ್ ಅವರು ಎಚ್ಚರಿಕೆ ನೀಡಿದ್ದು ಈ ಕುರಿತಂತೆ ಪೋಷಕರು, ಮಕ್ಕಳು ಮತ್ತು ಕಾಲೇಜು ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುಗಮ ಸಂಚಾರ ಕುರಿತ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದು ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಪೋಷಕರು ದಂಡ ಕಟ್ಟುವುದರ ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಕಾಲೇಜಿಗೆ ವಾಹನ ತೆಗೆದುಕೊಂಡು ಹೋದರೆ ಪ್ರಾಂಶುಪಾಲರೇ ಹೊಣೆಗಾರರಾಗಲಿದ್ದಾರೆ ಎಂದಿದ್ದಾರೆ.
ಆರ್.ಟಿ.ಒ ಅಧಿಕಾರಿ ಗಂಗಾಧರ್ ರವರು ಪಿಯುಸಿ, ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ಬೈಕುಗಳನ್ನು ತರುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಕಾಲೇಜಿಗೆ ವಾಹನಗಳನ್ನು ತಂದರೆ ಪ್ರಾಂಶುಪಾಲರೇ ಹೊಣೆಯಾಗುತ್ತಾರೆ. ಈ ವೇಳೆ ಪ್ರಾಂಶುಪಾಲರ ವಿರುದ್ಧವು ಪ್ರಕರಣ ದಾಖಲಿಸಬಹುದು ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಇದೆ ವೇಳೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಕೂಡ ಮಾತನಾಡಿದ್ದು, ಅಪ್ರಾಪ್ತರ ಕೈಗೆ ಬೈಕು ಕೊಟ್ಟರೆ ಪೋಷಕರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ತೀರ್ಥಹಳ್ಳಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಪೋಷಕರು ಶಿಕ್ಷೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಮೊದಲು 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಅಷ್ಟೆ ಅಲ್ಲದೆ, ಜೈಲು ಶಿಕ್ಷೆ ಕೂಡ ವಿಧಿಸಲಾಗುವ ಕುರಿತು ಎಚ್ಚರಿಕೆ ನೀಡಿದ್ದಾರೆ.