ಮೀನು ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ | ಒಮ್ಮೆ ಈ ಮಾಹಿತಿ ತಿಳಿದುಕೊಂಡರೆ ಮೀನು ನಿಮ್ಮ ಫೆವರೆಟ್ ಆಗಿಬಿಡುತ್ತೆ!!
ಹಲವರಿಗೆ ಮೀನು ಸಾರು ಅಂದ್ರೆ ತುಂಬಾ ಇಷ್ಟ. ಮೀನು ಸಾಂಬಾರನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಹಲವರಿಗೆ ಗೊತ್ತಿಲ್ಲ. ಮೀನಿನ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಇನ್ನೂ, ಈ ಮೀನಿನಲ್ಲಿ ಏನೆಲ್ಲಾ ಅಂಶಗಳಿವೆ? ಇದು ಹೇಗೆ ಆರೋಗ್ಯಕ್ಕೆ ಒಳ್ಳೆಯದು? ಇದರ ಪ್ರಯೋಜನ ಏನು? ಎಂಬುದನ್ನೆಲ್ಲಾ ತಿಳಿಯೋಣ.
ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೇರಳವಾಗಿವೆ. ಹಾಗಾಗಿ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ದೇಹಕ್ಕೆ ಇದನ್ನು ತಯಾರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಒಮೆಗಾ -3 ಕೊಬ್ಬಿನಾಮ್ಲವನ್ನು ಮರುಪೂರಣಗೊಳಿಸಬಹುದು. ಹಾಗೂ ಮೀನಿನ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಹಾಗೇ ಮೀನನ್ನು ಹೆಚ್ಚು ಎಣ್ಣೆಯಲ್ಲಿ ಫ್ರೈ ಮಾಡಿ ಸೇವಿಸಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಾಗಿ ಮೀನು ಸಾರು ಸೇವಿಸಿದರೆ ತುಂಬಾ ಒಳ್ಳೆಯದು.
ಕಣ್ಣಿನ ದೃಷ್ಟಿಸುಧಾರಣೆ : ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳು ಇದೆ. ಹಾಗಾಗಿ ಮೀನಿನ ಸೇವನೆ ಕಣ್ಣು ಮತ್ತು ದೃಷ್ಟಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಸಾಲ್ಮನ್, ಟ್ಯೂನಾ, ಸಾರ್ಡೀನ್ ಮತ್ತು ಟ್ರೌಟ್ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿದ್ದು, ಈ ವರ್ಗದ ಕೊಬ್ಬುಗಳು ಕಣ್ಣು ಒಣಗುವುದನ್ನು ತಡೆಯಲು ಸಹಕಾರಿಯಾಗಿದೆ. ಹಾಗೂ ರೆಟಿನಾವನ್ನು ಸುರಕ್ಷತೆಯಿಂದ ಇರಿಸುತ್ತದೆ.
ಮೆದುಳನ್ನು ಚುರುಕಾಗಿಸುತ್ತದೆ: ಮೀನಿನ ಸೇವನೆಯಿಂದ ಮೆದುಳು ಬಲಗೊಳ್ಳುತ್ತದೆ. ಇದರಲ್ಲಿರುವ ಪ್ರೋಟೀನ್ ಹೊಸ ಕೋಶಗಳ ರಚನೆಗೆ ಸಹಕಾರಿಯಾಗಿದೆ. ಹಾಗೇ ಮೀನಿನ ಸೇವನೆಯಿಂದ ಮೆದುಳಿನಲ್ಲಿ ಬೂದು ದ್ರವ್ಯ ಹೆಚ್ಚುತ್ತದೆ. ಬೂದು ದ್ರವ್ಯವು ನಿಮ್ಮ ಮೆದುಳಿನಲ್ಲಿನ ಪ್ರಮುಖ ಕ್ರಿಯಾತ್ಮಕ ಅಂಗಾಂಶವಾಗಿದ್ದು, ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಮತ್ತು ನೆನಪುಗಳನ್ನು ಸಂಗ್ರಹಿಸುವ ನ್ಯೂರಾನ್‌ಗಳನ್ನು ಹೊಂದಿರುತ್ತದೆ. ಇದು ನೆನಪಿನ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಮೀನು ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕೂಡ ಕಡಿಮೆ ಎಂದು ಅಧ್ಯಯನ ಹೇಳುತ್ತದೆ.
ಹೃದಯಕ್ಕೆ ಒಳ್ಳೆಯದು : ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನಿನ ಸೇವನೆ ಮತ್ತು ವಿಟಮಿನ್ ಇ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ. ಹಾಗೂ ಮೀನಿನ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೇ ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಹೆಚ್ಚು ಮಾಡುತ್ತದೆ. ಮೀನಿನ ಎಣ್ಣೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಕಾರಿಯಾಗಿದೆ.
ಚರ್ಮದ ಸುಕ್ಕು ನಿವಾರಣೆ : ಮೀನಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ. ಹಾಗೂ ಮೀನಿನ ನಿಯಮಿತ ಸೇವನೆಯಿಂದ ವಯಸ್ಸಾದ ಲಕ್ಷಣಗಳು ಕಡಿಮೆ ಕಾಣುತ್ತದೆ. ಅಲ್ಲದೆ, ಮೀನಿನ ಸೇವನೆಯಿಂದ ಅದರಲ್ಲಿನ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಚರ್ಮವು ಒಣಗದಂತೆ ನೋಡಿಕೊಳ್ಳುತ್ತದೆ. ಇದು ಚರ್ಮವು ಸದಾ ಕಾಂತಿಯುತವಾಗಿರಲು ಸಹಕಾರಿಯಾಗಿದೆ.
ಉತ್ತಮ ನಿದ್ರೆ: ಮೀನು ಸೇವನೆ ಮಾಡುವುದರಿಂದ ಕೂಡ ಉತ್ತಮ ನಿದ್ರೆ ಬರುತ್ತದೆ. ನಿದ್ರೆ ಸಮಸ್ಯೆ ಇದ್ದರೆ, ಹೆಚ್ಚು ಮೀನು ತಿನ್ನುವುದನ್ನು ರೂಢಿಸಿಕೊಳ್ಳಿ. ಮೀನಿನ ಸೇವನೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನಿದ್ರೆಗೆ ಸಹಾಯ ಮಾಡುವ ವಿಟಮಿನ್ ಡಿ ಮೀನಿನಲ್ಲಿರುವ ಕಾರಣ ನಿದ್ರೆ ಚೆನ್ನಾಗಿ ಬರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹಾಗಾಗಿ ಮೀನಿನ ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.