ಮತ್ತೆ ನೆತ್ತರು ಹರಿಯಲು ಕಾರಣವಾಯಿತೇ ಆ ಒಂದು ಘಟನೆ!?ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಮಾಹಿತಿ-ಹಂತಕರು ಯಾರು!?
ಮಂಗಳೂರು: ಕರಾವಳಿ ಜಿಲ್ಲೆಗೆ ರಕ್ತ ಸಿಕ್ತ ಇತಿಹಾಸ ಕಳಂಕ ತರುತ್ತಿದೆ ಎನ್ನುವ ಮಾತುಗಳು ಗಂಭೀರವಾಗಿದೆ. ಹಿಂದಿನಿಂದಲೂ ಮಂಗಳೂರು-ಉಡುಪಿ ಜಿಲ್ಲೆಯಲ್ಲಿ ರಿವೆಂಜ್ ಹತ್ಯೆಗಳು ಒಂದರ ಮೇಲೊಂದರಂತೆ ಹೆಣಗಳನ್ನು ಉರುಳಿಸುತ್ತಲೇ ಇದೆ ಎನ್ನುವುದಕ್ಕೆ ಹಲವು ಪ್ರಕರಣಗಳು ಕಣ್ಣ ಮುಂದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಯ ಬಳಿಕ ಕರಾವಳಿ ರಕ್ತ ಸಿಕ್ತವಾಗಿತ್ತು. ಮಸೂದ್ ಬೆನ್ನಲ್ಲೇ ಬೆಳ್ಳಾರೆಯಲ್ಲಿ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ, ಪ್ರವೀಣ್ ಹತ್ಯೆಯ ಒಂದೆರಡು ದಿನಗಳ ಅಂತರದಲ್ಲಿ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನೊಬ್ಬನ ಹತ್ಯೆ ಹೀಗೆ ಸರಣಿ ಕೊಲೆಗಳು ನಡೆಯುತ್ತಲೇ ದಕ ಜಿಲ್ಲೆ ಉದ್ವಿಗ್ನ ಪರಿಸ್ಥಿತಿಗೆ ತಲುಪಿತ್ತು.
ಇತ್ತ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಾದ್ಯಂತ ಮುಂಜಾಗ್ರತ ಕ್ರಮವಾಗಿ ಬಾರ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿತ್ತು. ಜಿಲ್ಲೆಯ ಸಹಿತ ಹೊರ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿ, ಆರೋಪಿಗಳ ಹೆಡೆಮುರಿಕಟ್ಟಿದ ಬಳಿಕ ಜಿಲ್ಲೆಯು ಸಹಜ ಸ್ಥಿತಿಯತ್ತ ಮರಳಿದ್ದರೂ, ಅಲ್ಲಲ್ಲಿ ಈ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು.
ಕಳೆದ ಮೂರು ತಿಂಗಳಿನಿಂದ ರಕ್ತದ ವಾಸನೆ ಕಂಡಿರದ ಜಿಲ್ಲೆಯಲ್ಲಿ ನಿನ್ನೆ ಮತ್ತೊಮ್ಮೆ ನೆತ್ತರು ಹರಿದಿದೆ. ನಗರದ ಹೊರವಲಯದ ಸುರತ್ಕಲ್ ಸಮೀಪದ ಅಂಗಡಿಯೊಂದರ ಬಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಸುದ್ದಿ ಕ್ಷಣ ಮಾತ್ರದಲ್ಲಿ ರಾಜ್ಯವನ್ನೇ ತಲುಪಿದೆ. ಮೃತ ವ್ಯಕ್ತಿಯನ್ನು ಕೃಷ್ಣಾಪುರ ನಾಲ್ಕನೇ ಬ್ಲಾಕ್ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದ್ದು, ಘಟನೆಯ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಂತಕರ ಪತ್ತೆಗೆ ತಂಡಗಳನ್ನು ರಚಿಸಿದ್ದು, ಮುಂಜಾಗ್ರತ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲ ಪ್ರದೇಶಗಳ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಹತ್ಯೆಗೆ ಹಲವು ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಸದ್ಯ ಸುರತ್ಕಲ್ ಪ್ರದೇಶದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ತಪಾಸಣೆ ಸಹಿತ ಮುಂಜಾಗ್ರತೆ ವಹಿಸಿದ್ದು,ಹಂತಕರ ಪತ್ತೆಗೆ ರಚನೆಯಾದ ತಂಡಗಳು ಶೀಘ್ರ ಆರೋಪಿಗಳ ಬಂಧನದ ಭರವಸೆಯನ್ನಟ್ಟಿದೆ. ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ ಯಾಕಾಯಿತು, ಮತ್ತು ಯಾರು ನಡೆಸಿದ್ದಾರೆ ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲೂ ಕಾಡಿದೆ. ಹಳೆಯ ಘಟನೆಗಳ ರೀತಿಯಲ್ಲಿಯೇ ಇದೊಂದು ಧಾರ್ಮಿಕ ಅಸಹಿಷ್ಣು ದ್ವೇಷದ ಕೊಲೆಯೇ ಅಥವಾ ಕೊಲೆಗೆ ಬೇರೆ ಆಯಾಮಗಳಿವೆಯಾ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಪೊಲೀಸರು ಈಗ ಹಲವು ಆಯಾಮಗಳಿಂದ ಮಾಹಿತಿ ಕಲೆಹಾಕುತ್ತಿದ್ದು, ಈಗಿನ ವರದಿಗಳು ಬಂದಾಗ ಇದೊಂದು ಹಣಕಾಸಿನ ವಿಚಾರಕ್ಕೆ ಉಂಟಾದಾಗ ಹತ್ಯೆ ಎನ್ನುವ ಪ್ರಾಥಮಿಕ ಸುದ್ದಿ ಬಂದಿದೆ. ದುಡ್ಡಿನ ವಿಚಾರದಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಹತ್ಯೆ ನಡೆದಿದೆ ಎನ್ನುವ ವಿಚಾರವೊಂದು ಗಂಭೀರವಾಗಿ ಸುದ್ದಿಯಾಗಿ ಚಾಲ್ತಿಯಲ್ಲಿದೆ. ಪೊಲೀಸರ ಮತ್ತಷ್ಟು ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಿದೆ. ಕೃತ್ಯದ ಹಿಂದಿರುವ ಕೈಗಳು ಯಾವುವು ಎನ್ನುವ ವಿಚಾರ ಸದ್ಯಕ್ಕೆ ನಿಗೂಢವಾಗಿದ್ದು ಬಹುಶಃ ಇವತ್ತು ಸಂಜೆಯ ಹೊತ್ತಿಗೆ ಒಂದಷ್ಟು ಫ್ರೆಶ್ ಅಪ್ಡೇಟ್ ಬರುವ ನಿರೀಕ್ಷೆ ಇದೆ.