ದಿಢೀರನೆ ಕುಸಿದು ಬಿತ್ತು ರಸ್ತೆ | ಭೂಮಿಯೊಳಗೆ ಹೊಂಡದಲ್ಲಿ ಬಿದ್ದ ತರಕಾರಿ ವ್ಯಾಪಾರಿಗಳು

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೈದರಾಬಾದ್ ಮಾರುಕಟ್ಟೆ ಬಳಿ ದಿಢೀರ್ ಭೂಮಿ ಕುಸಿದ ಪರಿಣಾಮ ವ್ಯಾಪಾರಸ್ಥರು ಮಣ್ಣಿನಡಿ ಸಿಕ್ಕಿಹಾಕಿಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿತ ಕಂಡಿದ್ದು ವಾಹನಗಳು, ಹಣ್ಣು, ತರಕಾರಿ ತುಂಬಿದ್ದ ಚೀಲಗಳು ಮಣ್ಣಿನಡಿ ಸಿಲುಕಿಕೊಂಡ ಘಟನೆ ಡಿಸೆಂಬರ್ 24ರಂದು ನಡೆದಿದೆ.

ಗೋಶಾಮಹಲ್ ಪ್ರದೇಶದಲ್ಲಿನ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಭೂಕುಸಿತ ಉಂಟಾದ ಕಾರಣ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿದ್ದ ಜನರು ನೆಲಕ್ಕೆ ಬಿದ್ದ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಬಂದಿದ್ದು ರಸ್ತೆ ಮಧ್ಯ ಭಾಗವೇ ಒಡೆದುಹೋಗಿದೆ ಎನ್ನಲಾಗಿದೆ.

ಇದರ ಜೊತೆಗೆ ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಚೀಲಗಳು ಹೊಂಡದೊಳಗೆ ಹೂತುಹೋಗಿತ್ತು ಎನ್ನಲಾಗಿದೆ.ಈ ದುರ್ಘಟನೆಯ ಸಂದರ್ಭ ರಸ್ತೆಯಲ್ಲಿ ನಿಂತಿದ್ದ ವಾಹನಗಳ ಜೊತೆಗೆ ಅನೇಕ ಮಂದಿ ಗುಂಡಿಗೆ ಬಿದ್ದಿದ್ದು, ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳನ್ನು ಹೊರತರುವ ಜೊತೆಗೆ ಹೊಂಡಕ್ಕೆ ಬಿದ್ದ ಜನರ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಈ ರಸ್ತೆಯನ್ನು 2009 ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಿರ್ಮಿಸಲಾಗಿದೆ ಎಂದು ಗೋಶಾಮಹಲ್ ಪ್ರದೇಶದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದು, ಈ ಸೇತುವೆ ನಿರ್ಮಾಣಕ್ಕೆ ಕಳಪೆ ಕಬ್ಬಿಣ ಬಳಸಲಾದ ಹಿನ್ನೆಲೆ ಜನರ ಭಾರ ತಾಳಲಾರದೆ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದೆ ಎಂದು ಆರೋಪಿಸಿದ್ದಾರೆ.

ಈ ದುರ್ಘಟನೆ ಮಧ್ಯಾಹ್ನ 2 ಗಂಟೆ ಆಸುಪಾಸಿನಲ್ಲಿ ನಡೆದಿದೆ ಎಂದು ಶಾಹಿನಾಥಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಒಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಮನೆಗೆ ಕಳುಹಿಸಲಾಗಿದೆ. ಈ ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಕ್ರೇನ್‌ಗಳ ಸಹಾಯದಿಂದ ವಾಹನಗಳು ಮತ್ತು ಬಂಡಿಗಳನ್ನು ಹೊರತೆಗೆಯುವ ಕಾರ್ಯ ಪ್ರಾರಂಭಿಸಲಾಗಿದೆ.

ರಸ್ತೆ ಕುಸಿತದ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಘಟನೆಯ ಬಗ್ಗೆ ಜನರು ಆತಂಕ, ಅಸಮಾಧಾನ ಹೊರ ಹಾಕಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಹಣ ಕೊಳ್ಳೆ ಹೊಡೆಯುವುದನ್ನು ನಿಲ್ಲಿಸುವವರೆಗೆ ಈ ರೀತಿಯ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಬಳಕೆದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ರೀತಿ ಇದ್ದಕಿದ್ದಂತೆ ಮಣ್ಣು ಕುಸಿದು ಜೀವಕ್ಕೆ ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿದ್ದು, ಈ ಹಿನ್ನೆಲೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವತ್ತ ಕೊಂಚ ಲಕ್ಷ್ಯ ವಹಿಸಬೇಕಾದ ಅವಶ್ಯಕತೆ ಇದೆ. ಈ ನಡುವೆ ಘಟನೆ ನಡೆಯಲು ನೈಜ ಕಾರಣವೇನು ಎಂಬುದು ತನಿಖೆ ಬಳಿಕವಷ್ಟೇ ಬಹಿರಂಗವಾಗಬೇಕಿದೆ.

Leave A Reply

Your email address will not be published.