ಇಡೀ ಒಂದು ತಿಂಗಳು ದಿನಕ್ಕೆ 8 ಗಂಟೆಗಳ ಕಾಲ ಸ್ಟೇಷನ್ ಗೆ ಬಂದು ಹೋಗುವ ರೈಲುಗಳನ್ನು ಎಣಿಸೋದೇ ಟ್ರೈನಿಂಗ್ । ರೈಲ್ವೆಯಲ್ಲಿ ಜಾಬ್ ಪಕ್ಕಾ ಎಂಬ ಫ್ರಾಡ್ ಗೆ ಬಲಿಯಾದ ಹುಡುಗರು !!
ಒಳ್ಳೆಯ ಕೆಲಸ ಭಾರತೀಯ ರೈಲ್ವೆಯಲ್ಲಿ ಸಿಗುತ್ತೆ ಅನ್ನೋ ಕಾರಣಕ್ಕೆ ಇಡೀ ದಿನ ರೈಲುಗಳು ಮತ್ತು ಅವುಗಳ ಕೋಚ್‌ಗಳ ಆಗಮನ ಮತ್ತು ನಿರ್ಗಮನವನ್ನು ಒಂದು ತಿಂಗಳ ಕಾಲ ಎಣಿಸುತ್ತಾ ಕೂತು ಮೋಸ ಹೋದ ಅಭ್ಯರ್ಥಿಗಳ ವ್ಯಥೆ ಇದು. ತಮಿಳುನಾಡಿನ ಕನಿಷ್ಠ 28 ಜನರನ್ನು ನವದೆಹಲಿ ರೈಲು ನಿಲ್ದಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಯೋಜಿಸಲಾಗಿತ್ತು . ಇದೊಂದು ಫ್ರಾಡ್ ಎಂದು ಗೊತ್ತಿಲ್ಲದ ಅವರು ತಾವು ಮೋಸ ಹೋಗುತ್ತಿದ್ದಾರೆಂದು ತಿಳಿಯದೇ ಇಡೀ ತಿಂಗಳು ದಿನಪೂರ್ತಿ ರೈಲು ನಿಲ್ದಾಣಕ್ಕೆ ಬರುವ ರೈಲುಗಳನ್ನು ಎಣಿಸುತ್ತಾ ಕೂತು ಮೋಸ ಹೋದ ಘಟನೆ ಇದಾಗಿದೆ.
ದೆಹಲಿ ಪೋಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯು) ಸಲ್ಲಿಸಿದ ದೂರಿನ ಪ್ರಕಾರ, ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ), ಟ್ರಾಫಿಕ್ ಅಸಿಸ್ಟೆಂಟ್‌ಗಳು ಮತ್ತು ಗುಮಾಸ್ತರ ಹುದ್ದೆಗಳಿಗೆ ಕೆಲಸ ಸಿಗಲಿದೆ. ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಪಡೆಯಲು ಹಾಗೆ ಪ್ರತಿಯೊಬ್ಬರೂ 2 ಲಕ್ಷ ಮತ್ತು 24 ಲಕ್ಷ ರೂಪಾಯಿಗಳನ್ನು ತೆತ್ತಿದ್ದಾರೆ. ಕೆಲಸದ ಟೈನಿಂಗ್ ನ ಭಾಗವಾಗಿ ಆ ‘ ಅಭ್ಯರ್ಥಿ ‘ಗಳನ್ನೆಲ್ಲ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ತರಬೇತಿಗೆ ಹಾಕಲಾಗಿತ್ತು. ಅವರಿಗೆ ಕೊಟ್ಟ ಕೆಲಸ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುವ ಟ್ರೈನ್ ಗಳನ್ನು ಲೆಕ್ಕ ಮಾಡುವುದು. ಹಾಗೆ ಒಂದು ತಿಂಗಳುಗಳ ಕಾಲ, ದಿನಕ್ಕೆ 8 ಗಂಟೆಗಳ ಸಮಯ ನಿಯತ್ತಾಗಿ ಆ ಕೆಲಸ ಮಾಡಿದ್ದರು ಎಲ್ಲಾ ಅಭ್ಯರ್ಥಿಗಳು. ತಿಂಗಳು ಕಳೆದರೂ ಟ್ರೇನಿಂಗ್ ಮುಗಿಯದ ಹಿನ್ನೆಲೆಯಲ್ಲಿ ಟ್ರೈನಿಂಗ್ ಗೆ ಹಾಕಿದ ‘ ವ್ಯವಸ್ಥಾಪಕ ‘ ರನ್ನು ಸಂಪರ್ಕಿಸಲು ಅಭ್ಯರ್ಥಿಗಳು ಪ್ರಯತ್ನಿಸಿದ್ದಾರೆ. ಆಗ ತಾವು ಮೋಸ ಹೋಗಿರುವುದು ಅವರಿಗೆ ಗೊತ್ತಾಗಿದೆ.
ಈ ಬಗ್ಗೆ ನಿವೃತ್ತ ಸೈನಿಕ 78 ವರ್ಷದ ಎಂ ಸುಬ್ಬುಸಾಮಿ ಅವರು ನೀಡಿದ ದೂರಿನ ಪ್ರಕಾರ, ಜೂನ್ ಮತ್ತು ಜುಲೈ ನಡುವೆ ಹಗರಣ ನಡೆದಿದ್ದು, ಈ ಅವಧಿಯಲ್ಲಿ ಆಕಾಂಕ್ಷಿಗಳಿಗೆ ವಂಚಕರ ಗುಂಪು ಒಟ್ಟಾಗಿ 2.67 ಕೋಟಿ ರೂ. ಬಾಚಿದೆ. ಸುಬ್ಬುಸಾಮಿ ಎಂಬ ಮಾಜಿ ಸೈನಿಕ ಸಂತ್ರಸ್ತರನ್ನು ಆಪಾದಿತ ವಂಚಕರೊಂದಿಗೆ ಸಂಪರ್ಕ ಮಾಡಿ ಕೊಟ್ಟಿದ್ದರು. ಆದರೆ ಇಡೀ ವಿಷಯವು ಹಗರಣ ಎಂದು ತನಗೆ ತಿಳಿದಿರಲಿಲ್ಲ ಮತ್ತು ಅವರ ಬಲೆಗೆ ತಾನೂ ಬಿದ್ದಿದ್ದೇನೆ ಎಂದು ಸುಬ್ಬುಸಾಮಿ ಅವರು ಹೇಳಿದ್ದಾರೆ.
ಸಂತ್ರಸ್ತರಲ್ಲಿ ಹೆಚ್ಚಿನವರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ಹಿನ್ನೆಲೆ ಹೊಂದಿರುವ ಪದವೀಧರರಾಗಿದ್ದಾರೆ. ಪ್ರಯಾಣ ಟಿಕೆಟ್ ಪರೀಕ್ಷಕರು, ಟ್ರಾಫಿಕ್ ಸಹಾಯಕರು ಅಥವಾ ಗುಮಾಸ್ತರುಗಳಂತಹ ವಿವಿಧ ಹುದ್ದೆಗಳಿಗೆ ತರಬೇತಿಯ ಮೊತ್ತಗಳನ್ನೂ ನೀಡಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯು ಸುಬ್ಬುಸಾಮಿಗೆ 2 ಲಕ್ಷದಿಂದ 24 ಲಕ್ಷದವರೆಗೆ ಹಣವನ್ನು ಪಾವತಿಸಿದ್ದಾರೆ. ಮತ್ತು ಸುಬ್ಬುಸಾಮಿ ಅವರು ಆ ಹಣವನ್ನು ವಿಕಾಸ್ ರಾಣಾ ಎಂಬ ವ್ಯಕ್ತಿಗೆ ಹಣವನ್ನು ಪಾವತಿಸಿದ್ದಾರೆ. ದೆಹಲಿಯ ಉತ್ತರ ರೈಲ್ವೇ ಕಚೇರಿಯಲ್ಲಿ ವಿಕಾಸ್ ರಾಣಾ ಉಪನಿರ್ದೇಶಕ ಎಂದು ಪೋಸ್ ಕೊಟ್ಟಿದ್ದಾನೆ.
ಸುಬ್ಬುಸಾಮಿ ಅವರು ತಮ್ಮ ಎಫ್‌ಐಆರ್‌ನಲ್ಲಿ ಹೇಳಿದಂತೆ ಕೊಯಮತ್ತೂರಿನ ನಿವಾಸಿ ಶಿವರಾಮನ್ ಎಂಬ ವ್ಯಕ್ತಿಯನ್ನು ದೆಹಲಿಯ ಎಂಪಿ ಕ್ವಾರ್ಟರ್ಸ್ ಒಂದರಲ್ಲಿ ಭೇಟಿಯಾಗಿದ್ದರು. ಶಿವರಾಮನ್ ಎನ್ನುವ ವ್ಯಕ್ತಿ ತಾನು ಸಂಸದರು ಮತ್ತು ಮಂತ್ರಿಗಳೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಂಡು, ದುಡ್ಡು ಕೊಟ್ಟರೆ ಭಾರತೀಯ ರೈಲ್ವೇಯಲ್ಲಿ ಉದ್ಯೋಗಾವಕಾಶವನ್ನು ಒದಗಿಸುವುದಾಗಿ ಹೇಳಿದ. “ನನ್ನ ನಿವೃತ್ತಿಯ ನಂತರ, ನಮ್ಮ ಪ್ರದೇಶದ ನಿರುದ್ಯೋಗಿ ಯುವಕರಿಗೆ ಯಾವುದೇ ಹಣಕಾಸಿನ ಆಸೆಯಿಲ್ಲದೆ ಸೂಕ್ತವಾದ ಉದ್ಯೋಗವನ್ನು ಹುಡುಕಲು ನಾನು ಸಹಾಯ ಮಾಡುತ್ತಿದ್ದೇನೆ” ಹಾಗಾಗಿ ನಾನು ಹುಡುಗರಿಗೆ ಒಳ್ಳೆಯದಾಗಲಿ ಎಂದು ನನಗೆ ಪರಿಚಯ ಆದ ವಿಕಾಸ್ ರಾಣಾ ಎಂಬವರ ಮೂಲಕ ಹುಡುಗರಿಗೆಲ್ಲಾ ಕೆಲಸ ನೀಡಲು ನಾನು ಪ್ರಯತ್ನಿಸಿದ್ದೆ. ಎಲ್ಲರ ಬಳಿ ದುಡ್ಡು ಕಲೆಕ್ಟ್ ಮಾಡಿ ವಿಕಾಸ್ ರಾಣಾಗೆ ನೀಡಿದ್ದೆ ಎಂದು ತಮಿಳುನಾಡಿನ ವಿರುದುನಗರ ಜಿಲ್ಲೆಯ ತಮ್ಮ ಸ್ವಗ್ರಾಮದಿಂದ ಫೋನ್ ಮೂಲಕ ಪಿಟಿಐಗೆ ಮಾಹಿತಿ ನೀಡಿದ್ದಾರೆ ಸುಬ್ಬುಸಾಮಿ.
ಉದ್ಯೋಗಾಕಾಂಕ್ಷಿಗಳೊಂದಿಗೆ ನನ್ನನ್ನೂ ದೆಹಲಿಗೆ ಬರುವಂತೆ ಶಿವರಾಮನ್ ಕೇಳಿಕೊಂಡಿದ್ದರು ಎಂದು ಸುಬ್ಬುಸಾಮಿ ಆರೋಪಿಸಿದ್ದಾರೆ. ಆರಂಭದಲ್ಲಿ ಮೂವರು ಅಭ್ಯಥಿಗಳು ಮಾತ್ರ ಇದ್ದರು. ಆದರೆ ಮಧುರೈ ಮತ್ತು ಸುತ್ತ ಮುತ್ತಲಿನ ನಮ್ಮ ಹಳ್ಳಿಗಳಲ್ಲಿ ಅವರ ಉದ್ಯೋಗ ತರಬೇತಿಯ ಸುದ್ದಿ ಹರಡುತ್ತಿದ್ದಂತೆ ಇನ್ನೂ 25 ಮಂದಿ ಸೇರಿಕೊಂಡರು.
ಕೆಲಸ ಮಾಡಿಕೊಡು ಶುಲ್ಕವಾಗಿ ಹಣವನ್ನು ಪಾವತಿಸಿದ ನಂತರ, ಈ ನಿರೀಕ್ಷಿತ ಅಭ್ಯರ್ಥಿಗಳನ್ನು ಕನ್ನಾಟ್ ಪ್ಲೇಸ್‌ನ ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆಸಲಾಯಿತು. ಮತ್ತು ನಂತರ ಉತ್ತರ ರೈಲ್ವೆಯ ಜೂನಿಯರ್ ಇಂಜಿನಿಯರ್, ಶಂಕರ್ ಮಾರ್ಕೆಟ್ ಕಚೇರಿಯಲ್ಲಿ ದಾಖಲೆ ಪರಿಶೀಲನೆಗಾಗಿ ಕರೆಯಲಾಯಿತು. ಆದರೆ ರಾಣಾ ಅವರನ್ನು ಯಾವುದೇ ರೈಲ್ವೆ ಕಟ್ಟಡದೊಳಗೆ ಕರೆದೊಯ್ಯಲಿಲ್ಲ. ಆದರೆ ತರಬೇತಿಗಾಗಿ ಆದೇಶಗಳು, ಗುರುತಿನ ಚೀಟಿಗಳು, ತರಬೇತಿ ಪೂರ್ಣಗೊಂಡ ಪ್ರಮಾಣಪತ್ರಗಳು ಮತ್ತು ನೇಮಕಾತಿ ಪತ್ರಗಳಂತಹ ಎಲ್ಲಾ ದಾಖಲೆಗಳನ್ನು ಅಭ್ಯರ್ಥಿಗಳಿಗೆ ಕೊಟ್ಟಿದ್ದರು. ಅದನ್ನು ರೈಲ್ವೇ ಅಧಿಕಾರಿಗಳೊಂದಿಗೆ ಕ್ರಾಸ್ ವೆರಿಫೈ ಮಾಡಿದಾಗ ನಕಲಿ ಎಂದು ತಿಳಿದುಬಂದಿತ್ತು.
“ದಾಖಲೆ ಪರಿಶೀಲನೆಯ ನಂತರ ಮೋಸ ನಿಚ್ಚಳವಾಗಿದೆ. ವಿಕಾಸ್ ರಾಣಾ ಮತ್ತು ಅವರ ಸಹವರ್ತಿ ದುಬೆ ಅವರು ಅಭ್ಯರ್ಥಿಗಳನ್ನು ದೆಹಲಿಯ ಬರೋಡಾ ಹೌಸ್‌ಗೆ ಸ್ಟಡಿ ಮೆಟೀರಿಯಲ್ ಮತ್ತು ಕಿಟ್ ನೀಡಲು ಕರೆದೊಯ್ದರು ಮತ್ತು ತರಬೇತಿಗಾಗಿ ಖೋಟಾ / ಫ್ಯಾಬ್ರಿಕೇಟೆಡ್ ಆರ್ಡರ್‌ಗಳನ್ನು ಸಹ ನೀಡಿದರು.. ಅದರ ಬೆನ್ನಲ್ಲೇ ಎಲ್ಲ ಅಭ್ಯರ್ಥಿಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಬಂದು ಹೋಗುವ ಕೆಲಸ ಮಾಡಲು ತೊಡಗಿದ್ದರು. ನಮಗೆ ವಿಷ್ಯ ತಿಳಿಯುವಾಗ ಸಮಯ ಮೀರಿತ್ತು. ”ಎಂದು ಸುಬ್ಬುಸಾಮಿ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.