ರಾಜ್ಯ ಚುನಾವಣೆ-2023: ಜೆಡಿಎಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ । ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ !

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹೆಚ್ ಡಿಕೆ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಮ್ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಪಟ್ಟಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಲಿದ್ದಾರೆ. ಮೊದಲ ಪಟ್ಟಿಯಲ್ಲಿ ತಮ್ಮದೇ ಕುಟುಂಬದ ಹೆಸರುಗಳು ಹೆಚ್ಚಾಗಿ ಇರೋದು ವಿಶೇಷವಾಗಿ ಈಗ ಚರ್ಚೆ ಆಗುತ್ತಿದೆ.

ಅಲ್ಲದೆ ಮಾಜಿ ಸಚಿವ ಜಿಟಿ ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದರೆ, ಅವರ ಪುತ್ರ ಹರೀಶ್ ಗೌಡರಿಗೆ ಸದ್ಯ ಬಿಜೆಪಿಯಲ್ಲಿರುವ ಎಚ್ ವಿಶ್ವನಾಥ್ ರ ತವರು ಕ್ಷೇತ್ರ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ರಾಮನಗರ ಕ್ಷೇತ್ರವನ್ನು ನಿಖಿಲ್ ಕುಮಾರಸ್ವಾಮಿ ಪ್ರತಿನಿಧಿಸಲಿದ್ದಾರೆ. ಈ ಕ್ಷೇತ್ರವನ್ನು ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿಗೆ ಈ ಹಿಂದೆ ಬಿಟ್ಟುಕೊಟ್ಟಿದ್ದರು. ಅನಿತಾ ಕುಮಾರಸ್ವಾಮಿ ಅಲ್ಲಿ ಗೆದ್ದು ಬಂದಿದ್ದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇದ್ದಾಗ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ ಆಗ ಯಾವುದೇ ಅಭ್ಯರ್ಥಿಯನ್ನೂ ಹಾಕದೇ ಇದ್ದದ್ದು ಅನಿತಾ ಕುಮಾರಸ್ವಾಮಿ ಅವರ ಗೆಲುವು ಸಲೀಸಾಗಿತ್ತು. ಅಷ್ಟೇ ಅಲ್ಲದೇ ಕಾಂಗ್ರೆಸ್ ನ ಮೂಲದವರಾಗಿದ್ದ ಎಲ್ ಚಂದ್ರಶೇಖರ್ ಬಿಜೆಪಿ ಸೇರ್ಪಡೆಗೊಂಡು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದರು. ಪರಿಣಾಮ ಅಭ್ಯರ್ಥಿಯಾಗಿದ್ದ ಅನಿತಾ ಕುಮಾರಸ್ವಾಮಿ 1,09,137 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದರು.

ರಾಮನಗರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಇಕ್ಬಾಲ್ ಹುಸೇನ್ ಹೆಚ್ಎ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಹಾಲಿ ಶಾಸಕರಿಗೆ ಟಿಕೆಟ್, ಬಂಡಾಯ ಶಾಸಕರ ಹೆಸರು ಕೈಬಿಟ್ಟಿದೆ ಜೆಡಿಎಸ್. ಮೊದಲ ಪಟ್ಟಿಯಲ್ಲಿ ಜೆಡಿಎಸ್ ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಿದೆ. ಆದರೆ ಬಂಡಾಯ ಸಾರಿರುವ ಇಬ್ಬರು ಹಾಲಿ ಶಾಸಕರು- ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ, ಅರಸಿಕೆರೆ ಶಾಸಕ ಕೆಎಂ ಶಿವಲಿಂಗೇಗೌಡರ ಹೆಸರನ್ನು ಮೊದಲ ಪಟ್ಟಿಯಿಂದ ಕೈಬಿಡಲಾಗಿದೆ.

Leave A Reply

Your email address will not be published.