ಹೊಸ ವರ್ಷದ ಮೊದಲ ವಾರದಲ್ಲಿ ಗುಡ್ ನ್ಯೂಸ್ । KPTCL ನ AE, JE ನೇಮಕ ಫಲಿತಾಂಶ- ಸಚಿವ ವಿ ಸುನೀಲ್ ಕುಮಾರ್

ಬೆಳಗಾವಿ: ಕೆಪಿಟಿಸಿಎಲ್ (KPTCL) ನಡೆಸಿದ ಸಹಾಯಕ ಇಂಜಿನೀಯರ್ (AE), ಕಿರಿಯ ಇಂಜಿನೀಯರ್ ಹಾಗೂ ಕಿರಿಯ ಸಹಾಯಕ ಇಂಜಿನೀಯರ್ (JE) ಹುದ್ದೆಗಳ ನೇಮಕಕ್ಕೆ ದಿನಾಂಕ ಹತ್ತಿರ ಬರುತ್ತಿದೆ. ಆಯಾ ಹುದ್ದೆಗಳ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಹೊಸವರ್ಷದಲ್ಲಿ ಗುಡ್ ನ್ಯೂಸ್ ಸಿಗಲಿದೆ.

 

ಕೆಪಿಟಿಸಿಎಲ್ ನಡೆಸಿದ ಸಹಾಯಕ ಇಂಜಿನೀಯರ್, ಕಿರಿಯ ಇಂಜಿನೀಯರ್ ಹಾಗೂ ಕಿರಿಯ ಸಹಾಯಕ ಇಂಜಿನೀಯರ್ ಹುದ್ದೆಗಳ ಪರೀಕ್ಷಾ ಫಲಿತಾಂಶ ಜನವರಿ 7 ರ ಒಳಗೆ ಬರುವ ನಿರೀಕ್ಷೆ ಇದೆ. ಜನವರಿ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟಿಸಲಾಗುವುದು, ಜೊತೆಗೆ ಕೀ ಉತ್ತರಗಳನ್ನು ವಾರದೊಳಗೆ ಪ್ರಕಟಿಸಲಾಗುವುದು ಎಂದು ಸಚಿವ ವಿ. ಸುನೀಲ್‌ಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯ ಪ್ರಶ್ನೋತ್ತರದ ವೇಳೆ ಶಾಸಕ ಸುರೇಶ ಕುಮಾರ್ ಅವರ ಪ್ರಶ್ನೆಗೆ ಸುನಿಲ್ ಕುಮಾರ್ ಉತ್ತರಿಸಿದರು. ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಕ್ರಮವಹಿಸುವಂತೆ ಸಚಿವರಲ್ಲಿ ಕೋರಿದ್ದರು ಶಾಸಕ ಸುರೇಶ್ ಕುಮಾರ್.

ಅದಕ್ಕೆ ಉತ್ತರಿಸಿದ ಸಚಿವ ಸುನಿಲ್ ಕುಮಾರ್ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳನ್ನು 5 ತಿಂಗಳ ಹಿಂದೆ ನಡೆಸಲಾಗಿದೆ. ಆದರೆ ಫಲಿತಾಂಶ ಪ್ರಕಟಿಸಿಲ್ಲ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಕೆಇಎ ಜೊತೆಗೆ ಫಾಲೋಅಫ್ ಮಾಡುತ್ತಿದ್ದೇವೆ. ಈ ವಾರದಲ್ಲಿ ಅಥವಾ ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಿ, ಜನವರಿ ಮೊದಲ ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಹಾಗಾಗಿ ಜನವರಿ ಮೊದಲ ವಾರದಲ್ಲಿ ಹೊಸ ಇಂಜಿನಿಯರುಗಳ ನೇಮಕಾತಿಗೆ ಚಾಲನೆ ಸಿಗಲಿದೆ.

Leave A Reply

Your email address will not be published.