ಮನೆ ಬಾಗಿಲಿಗೆ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣು ನೇತುಹಾಕುವುದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಗೊತ್ತೇ?
ಪ್ರತಿ ಅಂಗಡಿಯ ಮುಂದೆ ಅಂಗಡಿಯ ಮಾಲೀಕರು ನಿಂಬೆ ಹಣ್ಣು ಹಾಗೂ 7 ಕಾಯಿ ಮೆಣಸನ್ನು ದಾರದಲ್ಲಿ ಕಟ್ಟಿ ತೂಗು ಹಾಕಿರುವುದನ್ನು ನೋಡುತ್ತೇವೆ. ಹಾಗೇನೆ ಕೆಲವೊಂದು ವಾಹನಗಳಿಗೂ ನಿಂಬೆಹಣ್ಣು ಕಟ್ಟಿರುವುದನ್ನು ಗಮನಿಸಿರುತ್ತೇವೆ. ನಿಂಬೆ ಹಣ್ಣು ಹಾಗೂ ಕಾಯಿ ಮೆಣಸನ್ನು ಕಟ್ಟಿರುವ ಹಿಂದಿನ ಕಾರಣವೇನು ಎನ್ನುವುದು ಕೆಲವೊಮ್ಮೆ ಕಟ್ಟಿರುವವನಿಗೂ ಗೊತ್ತಿರುವುದಿಲ್ಲ. ಕೇಳಿದರೆ ಹಿಂದಿನಿಂದ ಅನುಸರಿಸಿಕೊಂಡು ಬಂದ ಕ್ರಮ, ಸಂಪ್ರದಾಯವೆಂದು ಹೇಳಿ ಸುಮ್ಮನಾಗುತ್ತಾರೆ.
ಆದ್ರೆ, ಇದರ ಹಿಂದಿರುವ ಮುಖ್ಯ ಕಾರಣ ತಿಳಿದುಕೊಳ್ಳೋದು ಮುಖ್ಯ. ಹಾಗಿದ್ರೆ ಬನ್ನಿ ಈ ಕ್ರಮದ ಹಿಂದಿರುವ ಕಾರಣ ತಿಳಿಯೋಣ.. ಮನೆ, ವಾಹನ, ವ್ಯವಹಾರದ ಮೇಲೆ ಕೆಟ್ಟ ಕಣ್ಣು ಬೀಳಬಾರದು ಎಂಬ ದೃಷ್ಟಿಯಿಂದ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುತ್ತಾರೆ ಅನ್ನೋದು ಕೂಡ ಜನರ ನಂಬಿಕೆ. ಹಾಗೆಯೇ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣು ನೇತುಹಾಕುವುದರಿಂದ ದುಷ್ಟ ಶಕ್ತಿಗಳು ದೂರ ಉಳಿಯುತ್ತವಂತೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.
ಹೌದು. ಇದು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ, ಜೊತೆಗೆ ಮನೆ, ಕುಟುಂಬ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಮನೆ ಅಥವಾ ವ್ಯಾಪಾರದ ಮೇಲೆ ಯಾರದ್ದಾದರೂ ಕೆಟ್ಟ ಕಣ್ಣು ಬಿದ್ದರೆ ಎಲ್ಲವೂ ಹಾಳಾಗುತ್ತದೆ ಎಂದು ವಾಸ್ತು ಶಾಸ್ತ್ರದ ತಜ್ಞರು ನಂಬುತ್ತಾರೆ. ನಿಂಬೆಹಣ್ಣಿನ ಹುಳಿ ಮತ್ತು ಮೆಣಸಿನಕಾಯಿಯ ಖಾರದಿಂದಾಗಿ ಮನೆಯೊಳಗೆ ನೊಣ, ಸೊಳ್ಳೆ, ಕೀಟಗಳು ಬರುವುದಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದ್ರೆ, ದುಷ್ಟ ಕಣ್ಣಿನಿಂದ ದೂರವಿರಲು ನಿಂಬೆ ಮತ್ತು ಮೆಣಸಿನಕಾಯಿಯನ್ನು ಮನೆ ಮತ್ತು ಅಂಗಡಿಗಳಲ್ಲಿ ನೇತುಹಾಕಲಾಗುತ್ತದೆ.
ಮನೆಯ ಹೊರಗೆ ತೂಗಾಡುವ ನಿಂಬೆ-ಮೆಣಸಿನಕಾಯಿ ದುಷ್ಟ ಕಣ್ಣಿನ ಏಕಾಗ್ರತೆಯನ್ನು ತ್ವರಿತವಾಗಿ ಕರಗಿಸುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ವ್ಯಕ್ತಿಯು ಅದನ್ನು ನೋಡುವ ಮೂಲಕ ಅದರ ರುಚಿಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಈ ಕಾರಣಕ್ಕಾಗಿ ಅವರ ಏಕಾಗ್ರತೆಗೆ ತೊಂದರೆಯಾಗುತ್ತದೆ ತಕ್ಷಣವೇ ಅವರು ತಮ್ಮ ಗಮನವನ್ನು ಹಿಂತೆಗೆದುಕೊಳ್ಳುತ್ತಾರೆ.
ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಅನಾರೋಗ್ಯಕ್ಕೆ ತುತ್ತಾಗದಂತೆ ನಮ್ಮನ್ನು ಕಾಪಾಡುತ್ತದೆ. ನಿಂಬೆ-ಮೆಣಸಿನಕಾಯಿ ಕೀಟನಾಶಕ ಗುಣಗಳನ್ನು ಹೊಂದಿವೆ. ಇವುಗಳನ್ನು ನೇತು ಹಾಕುವುದರಿಂದ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರುತ್ತದೆ ಎಂಬ ಭಾವನೆಯೂ ಇದೆ.