Electric Water Heater : ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು ಜನವರಿ 1 ರಿಂದ ಬಂದ್ ಆಗಲಿವೆ | ಯಾಕೆ ?
ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. 01 ಜನವರಿ 2023ರಿಂದ ಸಿಂಗಲ್ ಸ್ಟಾರ್ ಹೊಂದಿರುವ ಎಲೆಕ್ಟ್ರಿಕ್ ವಾಟರ್ ಹೀಟರ್ ಕಾನೂನುಬದ್ಧವಾಗಿರುವುದಿಲ್ಲ ಎಂದು ಸಚಿವಾಲಯ ಹೇಳಿದ್ದು, ಈ ಹೊಸ ನಿಯಮ ಜನವರಿ 1 ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.
ಚುಮು ಚುಮು ಚಳಿಯಲ್ಲಿ ಬೆಚ್ಚಗಿನ ನೀರನ್ನು ಬಳಸುವುದೇ ಒಂದು ಮುದ. ಅದರಲ್ಲಿಯೂ ಈ ಮೈ ಕೊರೆಯುವ ಚಳಿಯಲ್ಲಿ ತಣ್ಣೀರನ್ನು ಮುಟ್ಟಿದರೆ ಫ್ರಿಡ್ಜ್ ಅಕ್ಕಿ ಇಟ್ಟ ಐಸ್ ರೀತಿಯ ಅನುಭವ ಖಂಡಿತ ನಿಮಾಗಾಗಿರಬಹುದು. ಭಾರತದಲ್ಲಿ ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ವಾಟರ್ ಹೀಟರ್‌ಗಳ ಬಳಕೆ ತುಸು ಹೆಚ್ಚೆಂದರೆ ತಪ್ಪಾಗದು.
ಹೊಸ ವರ್ಷದ ಹೊಸ್ತಿಲಲ್ಲಿ ನೀವು ಹೊಸ ವಾಟರ್ ಹೀಟರ್, ಗೀಸರ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಸರ್ಕಾರದ ಹೊಸ ಅಧಿಸೂಚನೆಯನ್ನು ತಿಳಿದುಕೊಳ್ಳುವುದು ಉತ್ತಮ. ವಾಟರ್ ಹೀಟರ್, ಗೀಸರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು ಜನವರಿ 1, 2023 ರಿಂದ ಸಿಂಗಲ್ ಸ್ಟಾರ್ ಹೊಂದಿರುವ ವಾಟರ್ ಹೀಟರ್‌ಗಳು ಕಾನೂನುಬದ್ಧವಾಗಿರುವುದಿಲ್ಲ ಎಂದು ತಿಳಿಸಿದೆ.
ಇಂಧನ ಸಚಿವಾಲಯದ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಸಿಂಗಲ್ ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್ ಹೊಸ ವರ್ಷದಿಂದ ಮಾರಾಟವಾಗುವುದಿಲ್ಲ ಎಂದು ಹೇಳಲಾಗಿದೆ.
ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಇಂಧನ ಸಚಿವಾಲಯದ ಹೊಸ ಅಧಿಸೂಚನೆ ಹೊರಡಿಸಿದೆ. ಹೌದು!! ಭಾರತ ಸರ್ಕಾರದ ಇಂಧನ ಸಚಿವಾಲಯವು ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು , ಸ್ಟಾರ್ ರೇಟಿಂಗ್‌ನೊಂದಿಗೆ ಹೀಟರ್‌ನ ಮೌಲ್ಯೀಕರಣದ ಕುರಿತಾದ ಮಾಹಿತಿ ವಿವರಿಸಲಾಗಿದೆ.
ಇದರಲ್ಲಿ ಸಿಂಗಲ್ ಸ್ಟಾರ್ ಎಂದರೆ ಒಂದು ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು 1 ಜನವರಿ 2023 ರಿಂದ 31 ಡಿಸೆಂಬರ್ 2025 ರವರೆಗೆ ಮಾನ್ಯವಾಗಿರುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ. ಇಂಧನ ಸಚಿವಾಲಯದ ಅಧಿಸೂಚನೆಯ ಅನುಸಾರ, 6 ಲೀಟರ್‌ನಿಂದ 200 ಲೀಟರ್ ಸಾಮರ್ಥ್ಯದ 1 ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು 1 ಜನವರಿ 2023 ರಿಂದ ಕಾನೂನುಬದ್ಧವಾಗಿರುವುದಿಲ್ಲ.
ಏಕೆಂದರೆ, ಸಿಂಗಲ್ ಸ್ಟಾರ್ ವಾಟರ್ ಹೀಟರ್‌ಗಳು ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತವೆ. ಹೀಗಾಗಿ, ಜನಸಾಮಾನ್ಯರ ಬಜೆಟ್ ಮೇಲೆ ಇದು ದೊಡ್ಡ ಹೊಡೆತ ಬೀಳಲಿದ್ದು ಇದು ಜನರ ಖರ್ಚನ್ನು ದುಪ್ಪಟ್ಟು ಗೊಳಿಸುತ್ತದೆ. ಹೀಗಾಗಿ, ಇಂತಹ ವಾಟರ್ ಹೀಟರ್‌ಗಳ ಬ್ಯಾನ್ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ಶೇಖರಣಾ ಮಾದರಿಯ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳ ಶಕ್ತಿಯ ಕಾರ್ಯಕ್ಷಮತೆಯ ಮಟ್ಟವನ್ನು ನವೀಕರಣ ಮಾಡುವ ಅಗತ್ಯತೆ ಹೆಚ್ಚಿದ್ದು, ಇದು ಕಡಿಮೆ ಶಕ್ತಿಯನ್ನು ಬಳಕೆ ಮಾಡುವಂತಿರಬೇಕು. ಹಾಗಾಗಿ, ನೀವು ಕೂಡ ಸಿಂಗಲ್ ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್ ಅನ್ನು ಬಳಸುತ್ತಿದ್ದರೆ ಇದರಿಂದ ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಿದ್ದರೆ ಆದಷ್ಟು ಶೀಘ್ರದಲ್ಲಿ ಅದನ್ನು ಬದಲಾಯಿಸುವುದು ಉತ್ತಮ.