BIGG NEWS | ರಾಜ್ಯ ಸರಕಾರದಿಂದ ಸೈನಿಕ, ಮಾಜಿ ಸೈನಿಕರಿಗೆ ಸಿಹಿ ಸುದ್ದಿ
ರಾಜ್ಯ ಸರ್ಕಾರದ ಜನತೆಯ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಇದೀಗ ಸೈನಿಕ, ಮಾಜಿ ಸೈನಿಕರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು!!.. ರಾಜ್ಯದ ಸೈನಿಕರು, ಮಾಜಿ ಸೈನಿಕರಿಗೆ ಉಚಿತವಾಗಿ ಜಮೀನು, ನಿವೇಶನ ಕಲ್ಪಿಸುವಲ್ಲಿ ಆಗುತ್ತಿದ್ದಂತಹ ವಿಳಂಬವನ್ನು ಪರಿಹರಿಸಿ, ಶೀಘ್ರವೇ ಜಮೀನು, ನಿವೇಶನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯದ ಪ್ರತಿ ಗ್ರಾಮದಲ್ಲಿ ವಿಲೇವಾರಿಗೆ ಲಭ್ಯವಿರುವ ಜಮೀನಿನ ಪೈಕಿ ಶೇ.10ರಷ್ಟು ಜಮೀನನ್ನು ಸೈನಿಕ, ಮಾಜಿ ಸೈನಿಕರಿಗೆ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿರುವ ಕುರಿತು ಮಾಹಿತಿ ನೀಡಲಾಗಿದೆ.
ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ತಾಲೂಕಿನಲ್ಲಿ ಮಂಜೂರಾತಿಗಾಗಿ ಲಭ್ಯವಿದ್ದಲ್ಲಿ ಮಂಜೂರು ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಒಂದು ವೇಳೆ ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಪಕ್ಷದಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ, ನಗರ ಪ್ರದೇಶದಲ್ಲಿ 1200 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಅಥವಾ ಗ್ರಾಮೀಣ ಪ್ರದೇಶದಲ್ಲಿ 2400 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಜಾರಿಯಲ್ಲಿರುವ ಸರ್ಕಾರದ ಯಾವುದೇ ವಸತಿ ಯೋಜನೆಯಡಿ, ಯಾವುದೇ ವಿಶೇಷ ಯೋಜನೆಯಡಿ ನಿವೇಶನವನ್ನು ಮಂಜೂರು ಮಾಡುವಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.
ಸೈನಿಕ, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್ ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಅಥವಾ ಸಂಬಂಧ ಪಟ್ಟ ಜಿಲ್ಲೆಯಲ್ಲಿ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ, ಉಚಿತವಾಗಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೈನಿಕ, ಮಾಜಿ ಸೈನಿಕರಿಗೆ ಜಮೀನು ಮಂಜೂರಾತಿ ಕೋರಿ ಸ್ವೀಕೃತವಾಗುವ ಅರ್ಜಿಗಳನ್ನು ವರ್ಗಾಯಿಸುವ ಬಗ್ಗೆ ಸ್ಪಷ್ಟೀಕರಣ ಕೋರಿ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿದೆ .ಈ ನಿಟ್ಟಿನಲ್ಲಿ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ, ಉಚಿತವಾಗಿ ಮಂಜೂರು ಮಾಡಲು ನಿಯಮಾನುಸಾರ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.