ಬದಲಾಗಲಿದೆಯಾ ನೋಟುಗಳ ಮೇಲಿನ ಗಾಂಧಿ ಚಿತ್ರ ?
ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ. ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯ ಪೂರೈಕೆಗೆ ಹಣ ಅತ್ಯಗತ್ಯ. 500, 1000ದಂತಹ ದೊಡ್ಡ ನೋಟು ಅಮಾನ್ಯ ಗೊಂಡಾಗ ಉದ್ದುದ್ದ ಸರತಿ ಸಾಲಲ್ಲಿ ನಿಲ್ಲಬೇಕಾಗಿದ್ದ ದಿನಗಳನ್ನು ಯಾರು ಮರೆಯುವಂತಿಲ್ಲ.
ಅರೇ.. ಇದೇನಪ್ಪಾ..ಮತ್ತೆ ನೋಟು ಅಮಾನ್ಯ ಆಗುತ್ತಾ ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು. ಆದ್ರೆ, ವಿಷಯ ಇದಲ್ಲ!!.ಬೇರೇನೇ ಇದೆ..ಈಗಿರುವ ಕರೆನ್ಸಿ ನೋಟುಗಳ ಮೇಲಿರುವ ಗಾಂಧಿ ಚಿತ್ರವನ್ನು ಬದಲಾಯಿಸುವ ಕುರಿತು ಊಹಾಪೋಹಗಳು ಹರಿದಾಡುತ್ತ ಇರುವುದು ನಿಮಗೆ ಗೊತ್ತಿರಬಹುದು.
ಈ ಕುರಿತಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ .ಭಾರತೀಯ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವಿ ಹಾಗೆಯೇ ಗಣೇಶನ ಚಿತ್ರಗಳನ್ನು ಒಳಗೊಂಡಂತೆ ಹೆಚ್ಚಿನ ಚಿತ್ರಗಳನ್ನು ಸೇರಿಸಲು ಸರ್ಕಾರವು ಯಾವುದಾದರು ವಿನಂತಿಯನ್ನು ಸ್ವೀಕರಿಸಿದೆಯೇ ಎಂದು ಕಾಂಗ್ರೆಸ್ ಸದಸ್ಯ ಆಂಟೋನಿ ಕೇಳಿದ್ದಾರೆ. ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಣಕಾಸು ಸಚಿವಾಲಯ ಆರ್.ಬಿ.ಐ. ನಿಲುವನ್ನು ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತೀಯ ನೋಟುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳು, ದೇವರು ಮತ್ತು ದೇವತೆಗಳು, ಪ್ರಾಣಿಗಳು ಇತ್ಯಾದಿಗಳ ಚಿತ್ರಗಳನ್ನು ಸೇರಿಸಲು ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. ಕರೆನ್ಸಿ ನೋಟುಗಳ ಮೇಲಿನ ಚಿತ್ರಗಳಿಗೆ ಸಂಬಂಧಿಸಿದಂತೆ ಹಲವಾರು ವಿನಂತಿಗಳು/ ಸಲಹೆಗಳನ್ನು ಸ್ವೀಕರಿಸಲಾಗಿದೆ.
ಈ ಸಂಬಂಧ ಆರ್.ಬಿ.ಐ ಜೂನ್ 06, 2022 ರಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ಬ್ಯಾಂಕ್ ನೋಟುಗಳಲ್ಲಿ ಯಾವುದೇ ಬದಲಾವಣೆ ತರುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಣೆ ನೀಡಿದೆ. ಇದರ ಜೊತೆಗೆ ಕರೆನ್ಸಿ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರವನ್ನು ತೆಗೆದುಹಾಕುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ..