KSRTC ನೌಕರರೇ ವೇತನದ ಕುರಿತು ಬಂತು ನಿಮಗೊಂದು ಸಿಹಿ ಸುದ್ದಿ

ರಾಯಚೂರು ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಎಲ್ಲ ನೌಕರರ ವೇತನ ಪರಿಷ್ಕರಣೆಗೆ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಭರವಸೆ ನೀಡಿದ್ದಾರೆ.

ಮಾನ್ವಿ ಪಟ್ಟಣದಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕವನ್ನು ಉದ್ಘಾಟಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಸಾರಿಗೆ ಸಂಸ್ಥೆಯ ನೌಕರರಿಗೆ 2016ರಿಂದ ವೇತನ ಪರಿಷ್ಕರಣೆ ಆಗದೆ ಇರುವುದನ್ನು ತಿಳಿಸಿದ್ದು, ಈ ಬೇಡಿಕೆ ಅನುಸಾರ 4 ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ 4 ಸಾವಿರ ಕೋಟಿ ರೂಪಾಯಿ ಅನುದಾನದ ಅವಶ್ಯಕತೆಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ. ಈ ಕುರಿತು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ್ದು, ಶೀಘ್ರದಲ್ಲೇ ವೇತನ ಪರಿಷ್ಕರಣೆ ಬೇಡಿಕೆ ಈಡೇರಿಸುವ ಭರವಸೆ ಕೂಡ ನೀಡಿದ್ದಾರೆ.

ಪ್ರತಿ ತಿಂಗಳು ನಿಗದಿತ ಸಮಯ ದಿನಾಂಕ 1ಕ್ಕೆ ನೌಕರರಿಗೆ ವೇತನ ಪಾವತಿಸಲಾಗುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದು ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕಾಗಿ 650 ಹೊಸ ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳಿಂದ ನೇರವಾಗಿ ಬೆಂಗಳೂರಿಗೆ ತೆರಳುವ 6 ಹೊಸ ವೋಲ್ವೊ ಬಸ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.


ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ನಿತ್ಯ ಕೋಟ್ಯಂತರ ಜನ ಸಾರಿಗೆ ಬಸ್‍ ಸೌಲಭ್ಯ ಬಳಕೆ ಮಾಡುತ್ತಿದ್ದು, ನಾಲ್ಕು ನಿಗಮಗಳಲ್ಲಿ 40 ಸಾವಿರ ಬಸ್‌ಗಳು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ರೀತಿ, ಬಸ್‍ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಜೊತೆಗೆ ಸುರಕ್ಷತೆ ಮತ್ತು ಭದ್ರತೆಗೆ ಮಹತ್ವ ನೀಡಲು ಸೂಚನೆ ನೀಡಲಾಗಿದೆ.

ಲಿಂಗಸುಗೂರು ಪಟ್ಟಣದಲ್ಲಿ ಸೋಮವಾರ ನೂತನ ಬಸ್‍ ನಿಲ್ದಾಣ ಮತ್ತು ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿದ ಬಳಿಕ, ಸಚಿವ ಶ್ರೀರಾಮುಲು, ರಾಜ್ಯದ ಬಡವರು,ಮಧ್ಯಮ ವರ್ಗದವರು ಕೂಡ ಹೈಟೆಕ್‍ ಬಸ್‌ಗಳಲ್ಲಿ ಸಂಚರಿಸುವ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ. 2030ರ ಅವಧಿಯೊಳಗಡೆ ರಾಜ್ಯದೆಲ್ಲೆಡೆ ಗ್ರಾಮೀಣ ಪ್ರದೇಶಗಳಿಗೆ ಹವಾನಿಯಂತ್ರಿತ ಸಾರಿಗೆ ಸೌಲಭ್ಯ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹೈಟೆಕ್‍ ಮತ್ತು ಹವಾನಿಯಂತ್ರಿತ ಬಸ್‍ ವ್ಯವಸ್ಥೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಮಂಜೂರಾತಿ ಕಲ್ಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಮಾನ್ವಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದ್ದು, ಪಟ್ಟಣದಲ್ಲಿ ಒಟ್ಟು 4.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಸತಿ ನಿಲಯದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿರುವ ಮಾಹಿತಿ ನೀಡಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲು ಅವರು ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಸ್ಟೇಟ್‍ ಬ್ಯಾಂಕ್‍ ಇಂಡಿಯಾದಲ್ಲಿ ಖಾತೆ ಹೊಂದಿದವರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ತಕ್ಷಣವೇ ನೀಡುವ ಒಡಂಬಡಿಕೆ ಮಾಡಿಕೊಂಡಿರುವ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ .


ಮುಂದಿನ ಹಂತದಲ್ಲಿ ಲಿಂಗಸುಗೂರಿಗೆ ಪ್ರಾದೇಶಿಕ ಸಾರಿಗೆ ಕಚೇರಿ ನೀಡಲು ಚಿಂತನೆ ನಡೆಸಿದ್ದು, ನೌಕರರ ಹಿತರಕ್ಷಣೆಗೆ ಸಂಸ್ಥೆ ಬದ್ಧವಾಗಿದೆ ಎಂದಿದ್ದಾರೆ. ಕರ್ತವ್ಯಕ್ಕೆ ಹಾಜರಿ, ರಜೆ ಇತರೆ ವಿಷಯಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿದ್ದು, ಆ ಕುರಿತು ನಿರ್ಭೀತಿಯಿಂದ ಆಡಿಯೊ, ವೀಡಿಯೋ ಇತರೆ ಸಾಕ್ಷಿ ದಾಖಲೆ ನೀಡಿದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದ್ದು, ಹೀಗಿದ್ದು, ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಕೂಡ ಸಚಿವರು ನೀಡಿದ್ದಾರೆ.

Leave A Reply

Your email address will not be published.