ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೇಲೆ ಕೇಸು ದಾಖಲು |
ಈ ಹಿಂದೆ ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಕಿತ್ತಾಟದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ದುನಿಯಾ ವಿಜಯ್ ಗೆ ಬೆದರಿಕೆ ಒಡ್ಡಿದ್ದಷ್ಟೇ ಅಲ್ಲದೆ ಅವರ ಕಾರಿಗೆ ಹಾನಿ ಕೂಡ ಮಾಡಿದ್ದರು. ಈ ಕಾರಣಕ್ಕೆ ಜಿಮ್ ಟ್ರೈನರ್ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 23, 2018 ರಂದು ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜೊತೆಗೆ ಅವರ ಮಗ ಸಾಮ್ರಾಟ್ ಕೂಡ ತೆರಳಿದ್ದರು. ದುನಿಯಾ ವಿಜಯ್ ಆ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಮಾರುತಿ ಗೌಡ ಎಂಬವರು ಕೆಲ ನಿಂದನಾತ್ಮಕ ಮಾತುಗಳನ್ನು ಆಡಿದ್ದರು ಎನ್ನಲಾಗಿತ್ತು.
ಹಾಗೂ ಈ ವೇಳೆ ವಿಜಯ್ ಅವರು ಜೀವ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದ್ದು, ಈ ಮಧ್ಯೆ ಆಕ್ರೋಶಗೊಂಡ ನಟನ ಅಭಿಮಾನಿಗಳು ಮಾರುತಿ ಗೌಡರನ್ನು ಸುತ್ತುವರೆದಿದ್ದಾರೆ. ನಂತರ ವಿಜಯ್ ಅವರನ್ನು ಅವರ ಕಾರಿನಲ್ಲಿ ಕೂರಿಸಿದ್ದಾರೆ. ಆದರೆ, ಮಾರುತಿ ಗೌಡರ ಸಂಬಂಧಿ ಪಾನಿಪುರಿ ಕಿಟ್ಟಿ ತಕ್ಷಣವೇ ಹೈಗ್ರೌಂಡ್ಸ್ ಪೊಲೀಸರನ್ನು ಸಂಪರ್ಕಿಸಿದ್ದು, ವಿಜಯ್ ಮಾರುತಿ ಗೌಡನನ್ನು ಅಪಹರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ನಟ ವಿಜಯ್ ನನ್ನು ಠಾಣೆಗೆ ಬರುವಂತೆ ಹೇಳಿದ್ದರು, ಆಗ ವಿಜಯ್ ಅವರು ಮಾರುತಿ ಗೌಡ ಅವರನ್ನು ಕೂಡ ಠಾಣೆಗೆ ಕರೆತಂದಿದ್ದರು.
ನಟ ವಿಜಯ್ ಠಾಣೆಗೆ ಬರುತ್ತಿದ್ದಂತೆ, ಕಿಟ್ಟಿ ಮತ್ತು ಅವರ ಸಹಾಯಕರು ನಟನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ, ಅಪಹರಣದ ಆರೋಪದ ಆಧಾರದ ಮೇಲೆ ನಟ ವಿಜಯ್ ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದು, ನಟ ಕಿಟ್ಟಿ, ಮಾರುತಿ ಗೌಡ ಮತ್ತು ಇತರರ ವಿರುದ್ಧ ಪ್ರತಿದೂರು ದಾಖಲಾಗಿತ್ತು.
ಆದರೂ ಕಿಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದು, ನಂತರ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಂಡಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿ ನಟ ವಿಜಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯವು ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಇನ್ನೂ, ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಕಿಟ್ಟಿ, ಮಾರುತಿ ಗೌಡ ಮತ್ತು ಇತರರ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.