Black Carrot Benefits: ಚಳಿಗಾಲದಲ್ಲಿ ಕಪ್ಪು ಕ್ಯಾರೆಟ್ ತಿಂದರೆ ಈ ಗಂಭೀರ ಕಾಯಿಲೆ ಕಡಿಮೆ ಆಗುತ್ತೆ!
ಕ್ಯಾರೆಟ್ ಅಥವಾ ಗಜ್ಜರಿ ಎಂದಾಕ್ಷಣ ನಮ್ಮ ಮನದಲ್ಲಿ ಮೂಡುವುದು ಕೇಸರಿ ಬಣ್ಣದ ಮೂಲಂಗಿಯಾಕಾರದ ತರಕಾರಿ. ಒಂದು ವೇಳೆ ಇದರ ಬಣ್ಣ ಗಾಢವಾಗಿದ್ದರೆ ಅದೇ ಕಪ್ಪು ಕ್ಯಾರೆಟ್. ಇದರ ಬಣ್ಣ ಕಪ್ಪಾದರೆ ಏನಂತೆ ಇದರ ಆರೋಗ್ಯ ಪ್ರಯೋಜನಗಳು ಹಲವಾರು. ಕಪ್ಪು ಎಂದಾಕ್ಷಣ ಇದು ಪರಿಪೂರ್ಣ ಕಪ್ಪು ಎಂದೇನಿಲ್ಲ, ಬದಲಿಗೆ ಕೇಸರಿ ಬಣ್ಣವೇ ಹೆಚ್ಚು ಗಾಢವಾಗಿ ಸುಮಾರು ನೇರಳೆ ಬಣ್ಣವನ್ನು ಪಡೆದಿರುತ್ತದೆ ಅಷ್ಟೇ. ಇದರ ಬಣ್ಣ ಅತಿ ಹೆಚ್ಚು ಗಾಢವಾಗಲು ಇದರಲ್ಲಿರುವ ಆಂಥೋಸೈಯಾನಿನ್ (anthocyanin) ಎಂಬ ಪೋಷಕಾಂಶ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಕಾರಣ. ಕಾಲಿ ಗಾಜರ್ ಕೇವಲ ಬಣ್ಣದಲ್ಲಿ ಮಾತ್ರವಲ್ಲ, ರುಚಿಯಲ್ಲಿಯೂ ಕೊಂಚ ಭಿನ್ನವಾಗಿದೆ. ಕಪ್ಪು ಕ್ಯಾರೆಟ್‌ನ ಪ್ರಯೋಜನಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಕಪ್ಪು ಕ್ಯಾರೆಟ್‌ನಲ್ಲಿ ಫೈಬರ್, ಪೊಟ್ಯಾಸಿಯಮ್, ವಿಟಮಿನ್-ಎ, ವಿಟಮಿನ್-ಸಿ, ಮ್ಯಾಂಗನೀಸ್, ವಿಟಮಿನ್-ಬಿ ಮುಂತಾದ ಪೋಷಕಾಂಶಗಳಿವೆ. ಇದು ಉತ್ತಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ:- ಕಪ್ಪು ಕ್ಯಾರೆಟ್ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಮೇಲೆ ದಾಳಿ ಮಾಡುವ ಪ್ರಬಲ ಗುಣವನ್ನು ಹೊಂದಿದೆ.
ಹೃದಯ ಸಂಬಂಧಿ ಕಾಯಿಲೆ:- ಆಂಥೋಸಯಾನಿನ್ ಎಂಬ ಅಂಶ ಕಪ್ಪು ಕ್ಯಾರೆಟ್‌ನಲ್ಲಿ ಹೇರಳವಾಗಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಪ್ಪು ಕ್ಯಾರೆಟ್ ರಕ್ತದಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಮೂಲಕ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕ್ಯಾರೆಟ್ ಜ್ಯೂಸ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ.
ಜೀರ್ಣಾಂಗ ಕ್ರಿಯೆ:- ಕಪ್ಪು ಕ್ಯಾರೆಟ್‌ನಲ್ಲಿ ಫೈಬರ್ ಸಮೃದ್ಧವಾಗಿದ್ದೂ, ಜೀರ್ಣಾಂಗ ವ್ಯವಸ್ಥೆಯನ್ನು ವೃದ್ಧಿಸುವ ಜೊತೆಗೆ ಮಲಬದ್ಧತೆ, ಗ್ಯಾಸ್, ಉಬ್ಬುವುದು, ಎದೆಯುರಿ, ಚಡಪಡಿಕೆ, ಅತಿಸಾರದಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ.
ಬಿಳಿ ರಕ್ತಕಣ ಉತ್ಪತ್ತಿಗೆ:- ಕಪ್ಪು ಕ್ಯಾರೆಟ್ ವಿಟಮಿನ್ ಸಿ ಹೊಂದಿದ್ದು, ಇದು ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ಬಾಹ್ಯ ಸೋಂಕು ಅಥವಾ ರೋಗದಿಂದ ರಕ್ಷಿಸುತ್ತದೆ.
ಕಣ್ಣಿನ ಆರೋಗ್ಯ:- ಕಪ್ಪು ಕ್ಯಾರೆಟ್‌ನಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಕೂಡ ಇದೆ. ಇದು ದೃಷ್ಟಿ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ನರವ್ಯವಸ್ಥೆ ಕಾಯಿಲೆ:- ಕಪ್ಪು ಕ್ಯಾರೆಟ್ ಸೇವನೆಯು ನರವೈಜ್ಞಾನಿಕ ಕಾಯಿಲೆಗಳನ್ನು ನಿಯಂತ್ರಣ ಮಾಡುತ್ತದೆ. ಕಾಲಿ ಗಾಜರ್ ಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಆಲ್ ಝೈಮರ್ಸ್ ಕಾಯಿಲೆಯಂತಹ ನರವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡಲು ಸಕಾರಾತ್ಮಕ ಪ್ರಯೋಜನಗಳನ್ನು ಪಡೆಯಬಹುದು.
ಉರಿಯೂತ:- ಕಾಲಿ ಗಾಜರ್ ನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಥೋಸಯಾನಿನ್ ರಾಸಾಯನಿಕಗಳು ಇರುವುದರಿಂದ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಮೂತ್ರನಾಳದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕ್ಯಾರೆಟ್‌ಗಳು ದೇಹಕ್ಕೆ ಕಾರ್ಸಿನೋಜೆನಿಕ್ ಕಣಗಳ ಪ್ರವೇಶವನ್ನು ತಡೆಯುತ್ತದೆ.
ಮಧುಮೇಹಿ:- ಕಪ್ಪು ಕ್ಯಾರೆಟ್ ಮಧುಮೇಹಿಗಳಿಗೆ ರಾಮಬಾಣವೆಂದೆ ಹೇಳಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರ ಜೊತೆಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ವಿರೋಧಿ:- ಕಪ್ಪು ಕ್ಯಾರೆಟ್ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಆಂಟಿ-ಆಕ್ಸಿಡೆಂಟ್ ಪರಿಣಾಮಗಳನ್ನು ಹೊಂದಿರುವ ಪೋಷಕಾಂಶವಾದ ಆಂಥೋಸೈಯಾನಿನ್ ನಂಬಲಾಗದಷ್ಟು ಹೆಚ್ಚಿನ ಸಾಂದ್ರತೆಯಲ್ಲಿ ಇರುವ ಕಾರಣ, ಕಾಲಿ ಗಾಜರ್ ಕ್ಯಾನ್ಸರ್ ಕೋಶಗಳ ವಿರುದ್ಧ ನಿಮ್ಮ ದೇಹಕ್ಕೆ ಅತ್ಯುತ್ತಮ ಉತ್ತೇಜನ ನೀಡುತ್ತದೆ.