ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಉತ್ತಮ ಆರೋಗ್ಯದ ಜೊತೆಗೆ ತಲೆಕೂದಲು ಉದುರುವ ಸಮಸ್ಯೆಗೂ ಸಿಗುತ್ತೆ ಮುಕ್ತಿ!

ಬದಲಾಗುತ್ತಿರುವ ಋತುಮಾನದಲ್ಲಿ ಕೂದಲು ಉದುರುವ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಾ ಇದೆ. ಶುಷ್ಕ ಗಾಳಿಯು ನಿಮ್ಮ ಕೂದಲಿನ ತೇವಾಂಶ ತೆಗೆದು, ಕೂದಲ ಆರೋಗ್ಯ ಹಾಳು ಮಾಡುತ್ತದೆ. ಜೊತೆಗೆ ಕೂದಲು ಒಣಗುವುದು ಮತ್ತು ಉದುರುವುದು, ಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಯಿಂದ ಹೊರ ಬರಲೆಂದೆ ಹಲವು ಉತ್ಪನ್ನಗಳನ್ನು ಬಳಸುತ್ತಾರೆ.

 

ಆದರೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗದೇ ಸಮಸ್ಯೆ ಹಾಗೇ ಉಳಿದುಕೊಂಡಿರುತ್ತದೆ. ಹೌದು. ಕೂದಲು ಉದುರುತ್ತಿದೆ ಎಂಬುವುದು ಬಹುತೇಕರ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ಹೇಗಪ್ಪಾ ತಡೆಗಟ್ಟುವುದು ಎಂದು ತಲೆಕೆಡಿಸಿಕೊಂಡಿದ್ದರೆ, ಸೆಲೆಬ್ರಿಟಿಗಳ ನ್ಯೂಟ್ರಿಷಿಯನಿಸ್ಟ್‌ ಆಗಿರುವ ನೇಹಾ ರಂಗಾಲನಿ ಕೂದಲಿನ ಆರೋಗ್ಯಕ್ಕೆ ಉತ್ತಮವಾದ ಟ್ರೀಟ್ಮೆಂಟ್ ಗಳನ್ನು ತಿಳಿಸಿದ್ದಾರೆ.

ನೇಹಾ ರಂಗಾಲನಿ ಕರಿಬೇವು, ನೆಲ್ಲಿಕಾಯಿ, ಸಿಹಿ ಗೆಣಸು, ಎಳ್ಳು, ಬೆಣ್ಣೆಹಣ್ಣು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಒಳ್ಳೆಯದು ಎಂಬುವುದಾಗಿ ಹೇಳಿದ್ದಾರೆ. ಕೂದಲು ತುಂಬಾ ತೆಳುವಾಗಿದ್ದರೆ ಈ 5 ಆಹಾರಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲಾರಂಭಿಸಿದರೆ ಕೆಲವು ವಾರಗಳಲ್ಲಿ ಕೂದಲು ಉದುರುವುದು ಕಡಿಮೆಯಾಗಿ ಕೂದಲಿನ ದಟ್ಟತೆ, ಆರೋಗ್ಯ ಹೆಚ್ಚಾಗುವುದು. ಹಾಗಿದ್ರೆ ಬನ್ನಿ ಆ ಉಪಯುಕ್ತ ಆಹಾರ ಯಾವುದೆಂದು ನೋಡೋಣ..

ಕರಿಬೇವು:
ಕರಿಬೇವನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ದಿನಾ 3-4 ಎಸಳು ಕರಿಬೇವು ಬಾಯಿಗೆ ಹಾಕಿ ಜಗಿಯಿರಿ.

ಕೂದಲಿನ ಬಾಹ್ಯ ಆರೈಕೆಗೆ ಕರಿಬೇವು ಬಳಸಿ ಹೀಗೆ ಮಾಡಿ:
ಅರ್ಧ ಲೀಟರ್‌ ತೆಂಗಿನೆಣ್ಣೆಗೆ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಸೇರಿಸಿ ಕಾಯಿಸಿ. ಎಣ್ಣೆ ಕುದಿಸಬೇಡಿ, ಸಿಮ್‌ನಲ್ಲಿಟ್ಟು ಕಾಯಿಸಿ. ಇದಕ್ಕೆ ನೆಲ್ಲಿಕಾಯಿ, ದಾಸವಾಳದ ಹೂ ಕೂಡ ಸೇರಿಸಬಹುದು. ನಂತರ ಆ ಎಣ್ಣೆಯನ್ನು ಸೋಸಿ ಡಬ್ಬದಲ್ಲಿ ಹಾಕಿಟ್ಟು ವಾರದಲ್ಲಿ 3 ಬಾರಿ ಈ ಎಣ್ಣೆಯಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದು. ತಲೆ ತೊಳೆಯಲು ಮೈಲ್ಡ್ ಶ್ಯಾಂಪೂ ಅಥವಾ ಸೀಗೆಕಾಯಿ ಪುಡಿ ಬಳಸಿದರೆ ಒಳ್ಳೆಯದು.

ನೆಲ್ಲಿಕಾಯಿ:
ನೆಲ್ಲಿಕಾಯಿಯನ್ನು ಕೂಡ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಇದರಿಂದ ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು, ದಿನಾ ಒಂದು ನೆಲ್ಲಿಕಾಯಿ ಸೇವಿಸಿ.

ನೆಲ್ಲಿಕಾಯಿ ಎಣ್ಣೆ:
ನೀವು ತಲೆಗೆ ಹಚ್ಚಲು ಬಳಸುವ ಎಣ್ಣೆಗೆ ನೆಲ್ಲಿಕಾಯಿಯನ್ನು ಜಜ್ಜಿ ಹಾಕಿ ಕಾಯಿಸಿ ಅಥವಾ ನೆಲ್ಲಿಕಾಯಿ ಪುಡಿ ಸೇರಿಸಿ. ನಂತರ ಈ ಎಣ್ಣೆಯನ್ನು ತಲೆಗೆ ಹಚ್ಚಿ, ಇದರಿಂದ ಕೂದಲಿನ ಬುಡ ಬಲವಾಗುವುದು. ಹೀಗೆ ನೆಲ್ಲಿಕಾಯಿ ಒಳಗಿನಿಂದ -ಹೊರಗಿನಿಂದ ನಿಮ್ಮ ಕೂದಲಿನ ರಕ್ಷಣೆ ಮಾಡುತ್ತದೆ.

ಸಿಹಿ ಗೆಣಸು:
ಪ್ರತಿದಿನ ಒಂದು ತುಂಡು ಸಿಹಿ ಗೆಣಸು ತಿನ್ನಿ. ಇದನ್ನು ಹಸಿಯಾಗಿ ತಿನ್ನಬಹುದು, ಇಲ್ಲದಿದ್ದರೆ ಹಬೆಯಲ್ಲಿ ಬೇಯಿಸಿ ತಿನ್ನಬಹುದು. ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಗಳಂತಹ ಟಾನಿಕ್ ಗುಣವಿದೆ. ಇದನ್ನು ದಿನಾ ತಿನ್ನಿ ಕೂದಲು ಸೊಂಪಾಗಿ ಬೆಳೆಯುವುದು.

ಎಳ್ಳು:
ಎಳ್ಳು ಕೂದಲಿನ ಕೂದಲು ಉದುರುವುದನ್ನು ತಡೆಟಗಟ್ಟಲು ತುಂಬಾ ಸಹಕಾರಿ. ದಿನಾ ಒಂದು ಚಮಚ ಎಳ್ಳು ತಿನ್ನಿ. ಇಲ್ಲದಿದ್ದರೆ 1 ಚಮಚ ಎಳ್ಳನ್ನು ಊಟದ ನಂತರ ಅಥವಾ ರಾತ್ರಿಯ ಊಟದ ನಂತರ ಅರ್ಧ ಘಂಟೆಯ ಬಳಿಕ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳು ಸಿಗುವುದು. ಎಳ್ಳೆಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡಿದರು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೆಣ್ಣೆ ಹಣ್ಣು:
ಬೆಣ್ಣೆಹಣ್ಣಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲ, ವಿಟಮಿನ್ ಬಿ ,ವಿಟಮಿನ್ ಸಿ, ಕಬ್ಬಿಣಾಂಶ ಗಳಿದ್ದು ತುಂಬಾನೇ ಒಳ್ಳೆಯದು. ಇದನ್ನು ಕೂಡ ಬೆಳಗ್ಗೆ ಸವಿಯಿರಿ.

ಬೆಣ್ಣೆಹಣ್ಣಿನ ಈ ಹೇರ್ ಮಾಸ್ಕ್‌ ಕೂಡ ಪರಿಣಾಮಕಾರಿ:

ಕೂದಲುದುರುವ ಮತ್ತು ಕೂದಲು ತೆಳುವಾಗುವಿಕೆಯ ಸಮಸ್ಯೆಯಿದ್ದರೆ ನುಗ್ಗೆಸೊಪ್ಪಿನ ಪುಡಿ 1 ಚಮಚ, ಸ್ವಲ್ಪ ಬೆಣ್ಣೆ ಹಣ್ಣು, 1 ಚಮಚ ತೆಂಗಿನೆಣ್ಣೆ ಅಥವಾ ನೀವು ತಲೆಗೆ ಬಳಸುವ ಎಣ್ಣೆ ಹಾಕಿ ಮಿಶ್ರ ಮಾಡಿ ತಲೆಗೆ ಹಚ್ಚಿ, 30 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ, ಹೊಳಪಿನಿಂದ ಕೂಡಿರುತ್ತದೆ.

ಇವುಗಳ ಜೊತೆಗೆ ಅಗಸೆ ಬೀಜ ಕೂಡ ತೆಗೆದುಕೊಳ್ಳಬಹುದು. ದಿನದಲ್ಲಿ 1 ಚಮಚ ಅಗಸೆ ಬೀಜ ತಿಂದರೆ ಇದು ಕೂಡ ಕೂದಲಿನ ಪೋಷಣೆ ಮಾಡುತ್ತದೆ. ಈ ಎಲ್ಲಾ ಆಹಾರಗಳು ಕೂದಲಿನ ಹಾಗೂ ದೇಹದ ಒಟ್ಟು ಮೊತ್ತದ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಈ ಆಹಾರ ಸೇವಿಸಿ ಆರೋಗ್ಯದ ಜೊತೆಗೆ ಉತ್ತಮ ಕೂದಲು ನಿಮ್ಮದಾಗಿಸಿಕೊಳ್ಳಿ…

Leave A Reply

Your email address will not be published.