ಸುಳ್ಯ: ಧಾರಾಶಾಹಿಯಾದ ಶಾಲಾವರಣದ ಬೃಹತ್ ಮರಗಳು!! ರಾತ್ರೋ ರಾತ್ರಿ ಕಳ್ಳ ಸಾಗಾಟ-ಇಲಾಖೆಯ ಜಾಣ ಮೌನ!! ಸುಳ್ಯದಲ್ಲಿ ಪ್ರತಿಭಟನೆಗೆ ಸಿದ್ಧತೆ
ಸುಳ್ಯ:ಶಾಲಾ ಆವರಣದಲ್ಲಿದ್ದ ಅತ್ಯಂತ ಬೆಲೆ ಬಾಳುವ ಬೃಹತ್ ಮರಗಳನ್ನು ಯಾವುದೇ ಅನುಮತಿ ಪಡೆಯದೇ ರಾಜಾರೋಷವಾಗಿ ಕಡಿದು, ರಾತ್ರೋ ರಾತ್ರಿ ಸಾಗಿಸಿದ ಪ್ರಕರಣವೊಂದು ಸುಳ್ಯದಲ್ಲಿ ನಡೆದಿದೆ. ತಾಲೂಕಿನ ಕಸಬಾ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದ ಜಾಗದಲ್ಲಿದ್ದ ಸುಮಾರು ನೂರಕ್ಕೂ ಹೆಚ್ಚು ಜಾತಿಯ ಮರಗಳನ್ನು ಕಡಿದಿರುವ ಬಗ್ಗೆ ಗಂಭೀರ ಚರ್ಚೆಯಾಗಿದ್ದು, ಪ್ರತಿಭಟನೆಗೆ ಸಿದ್ಧತೆ ನಡೆದಿದೆ.
ಮಾದರಿ ಶಾಲೆಗೆ ಸೇರಿದ ಸುಮಾರು ಐದು ಎಕರೆ ಜಾಗದಲ್ಲಿ ಹಲವು ಜಾತಿಯ ಮರಗಳಿದ್ದು, ಇವುಗಳನ್ನು ಸ್ಥಳೀಯ ಆಸ್ಪತ್ರೆಯ ಸೂಚನೆ ಎನ್ನುತ್ತಾ ಸ್ಥಳೀಯ ಗುತ್ತಿಗೆದಾರನೆನ್ನಲಾದ ವ್ಯಕ್ತಿಯೊಬ್ಬರು ಕಡಿದಿದ್ದರು ಎನ್ನಲಾಗಿದೆ. ಬೃಹತ್ ಮರಗಳು ಧಾರಾಶಾಹಿಯಾಗುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಈ ವಿಚಾರವನ್ನು ಶಿಕ್ಷಣಾಧಿಕಾರಿಗಳ ಸಹಿತ ಅರಣ್ಯ ಇಲಾಖೆಯ ಗಮನಕ್ಕೆ ತಂದಿತ್ತು.
ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಮರಗಳನ್ನು ಸ್ಥಳದಲ್ಲೇ ಇರಿಸುವಂತೆ ಹೇಳಿದ್ದು, ಇಲಾಖೆಯ ಮಾತಿಗೆ ಶರಣಾಗದ ಮರಗಳ್ಳರು ರಾತ್ರೋ ರಾತ್ರಿ ಬೆಲೆಬಾಳುವ ಮರಗಳನ್ನು ಸ್ಥಳದಿಂದ ಹೊತ್ತೊಯ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅತ್ತ ಮರಗಳ ಮಾರಣಹೋಮಕ್ಕೆ ಕಾರಣರಾದವರ ವಿರುದ್ಧ ಇಲಾಖೆಯೂ ಜಾಣ ಮೌನ ವಹಿಸಿದ್ದು,ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹದೊಂದಿಗೆ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಹಾಗೂ ಶಾಲಾ ಆಡಳಿತ ಮಂಡಳಿ ಪ್ರತಿಭಟನೆಗೆ ಸಿದ್ಧತೆ ನಡೆಸಿಕೊಂಡಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.