ಪಬ್ಲಿಕ್‌ನಲ್ಲೇ ಹೊಗೆ ಬಿಡೋ ಅಭ್ಯಾಸ ಇದೆಯಾ ? ಹಾಗಾದರೆ ಎಚ್ಚರ ಜನರೇ…ದಂಡ ವಿಧಿಸೋರು ನಿಮ್ಮ ಬಳಿ ಬರುತ್ತಾರೆ| ಹೇಗೆ ಅಂತೀರಾ ?
ಜನರ ಹಿತದೃಷ್ಟಿಯಿಂದ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೆ ತಂದರೂ ಕೂಡ ಕ್ಯಾರೇ ಎನ್ನದೆ ಓಡಾಡುತ್ತಾ ರೂಲ್ಸ್ ಬ್ರೇಕ್ ಮಾಡಿ ಟ್ರಾಫಿಕ್ ಪೊಲೀಸ್ ಅವರನ್ನು ಕಂಡ ಕೂಡಲೇ ಜೂಟ್ ಎನ್ನುವ ಕಿಲಾಡಿ ಏಜೆಂಟ್ ಗಳು ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುವುದರಲ್ಲಿ ಎಕ್ಸ್ಪರ್ಟ್ ಆಗಿದ್ದು, ಇದೀಗ ರೂಲ್ಸ್ ಬ್ರೇಕ್ ಮಾಡಿ ಓಡಾಡುವ ಎಕ್ಸ್ಪರ್ಟ್ ಗಳಿಗಾಗಿ ಆರೋಗ್ಯ ಇಲಾಖೆ ಹೊಸ ಪ್ಲಾನ್ ರೂಪಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲದೇ ಇತರರಿಗೆ ಕೂಡ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ವರ್ಷಾಂತ್ಯದ ವೇಳೆಗೆ ಜಿಪಿಎಸ್ ಆಧಾರಿತ ಆ್ಯಪ್ ಬಿಡುಗಡೆ ಮಾಡಲು ಅಣಿಯಾಗಿದೆ.
ಹೌದು!!..ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಉಪಾಯ ಮಾಡಿರುವ ಆರೋಗ್ಯ ಇಲಾಖೆ ‘ಸ್ಟಾಪ್ ಟೊಬ್ಯಾಕೋ’ ಆ್ಯಪ್ ತಯಾರಿಸಿದೆ. ಸಾರ್ವಜನಿಕವಾಗಿ ಬೀಡಿ, ಸಿಗರೇಟ್ ಸೇದುತ್ತಿರುವುದನ್ನು ಕಂಡರೆ ಜನರೆ ಫೋಟೊ ತೆಗೆದು ಅಪ್ಲೋಡ್ ಮಾಡಬಹುದಾಗಿದೆ. ಈ ಫೋಟೋ ನೋಡಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ದಂಡ ವಿಧಿಸಲಿದ್ದಾರೆ. ಈ ವ್ಯವಸ್ಥೆ ರಾಜ್ಯಾದ್ಯಂತ ಶೀಘ್ರದಲ್ಲೇ ಜಾರಿಯಾಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮುನ್ನ ಈ ವಿಚಾರ ಅರಿತು ಮುನ್ನೆಚ್ಚರಿಕೆ ವಹಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ತಪ್ಪುತ್ತದೆ.
ಈ ಆ್ಯಪ್ ಬಳಕೆಯ ಬಗ್ಗೆ ತಿಳಿಯುವುದಾದರೆ;
ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರು ಪ್ಲೇಸ್ಟೋರ್ಗೆ ಹೋಗಿ ‘ಸ್ಟಾಪ್ ಟೊಬ್ಯಾಕೋ’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅಂಗಡಿ, ಬೇಕರಿ, ಹೋಟೆಲ್, ಶಾಲೆ ಮತ್ತು ಕಾಲೇಜು ಸ್ಥಳ, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದರೆ ಆ ಸ್ಥಳದ ಚಿತ್ರವನ್ನು (ವ್ಯಕ್ತಿಯ ಫೋಟೋ ಅಗತ್ಯವಿಲ್ಲ) ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕಾಗಿದ್ದು, ಈ ಬಳಿಕ ಅಲ್ಲಿ ಕೇಳಲಾಗುವ ಜಿಲ್ಲೆ, ತಾಲೂಕು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳಿಗೆ ಲಿಂಕ್ ಒತ್ತುವ ಮೂಲಕ ಉತ್ತರಿಸಬೇಕಾಗುತ್ತದೆ. ಈ ಮೂಲಕ ಸಾರ್ವಜನಿಕರು ಕೂಡ ಆರೋಗ್ಯ ಇಲಾಖೆಯ ಹೊಸ ಪ್ಲಾನ್ ಗೆ ಸಾಥ್ ನೀಡಬಹುದಾಗಿದೆ.
ತಂಬಾಕು ನಿಷೇಧ ಜಾಗೃತಿ ಮಾಡುವ ನಿಟ್ಟಿನಲ್ಲಿ ಅಪ್ಲೋಡ್ ಆಗುವ ಫೋಟೋ ಮತ್ತು ಸಂದೇಶ ಸಂಬಂಧಪಟ್ಟ ಜಿಲ್ಲೆಯ ತಂಬಾಕು ನಿಯಂತ್ರಣಾ ಘಟಕಕ್ಕೆ ರವಾನೆಯಾಗಲಿದ್ದು, ಅಲ್ಲಿಂದ ಅದನ್ನು ತಾಲೂಕು ನಿಯಂತ್ರಣಾ ಘಟಕಕ್ಕೆ ಕಳುಹಿಸಲಾಗುತ್ತದೆ. ಈ ಆ್ಯಪ್ ಜಿಪಿಎಸ್ ತಂತ್ರಜ್ಞಾನ ಹೊಂದಿರುವುದರಿಂದ ದೂರು ಬಂದಿರುವ ನಿರ್ದಿಷ್ಟ ಸ್ಥಳವನ್ನು ಮ್ಯಾಪ್ ಮೂಲಕ ಪ್ರದರ್ಶಿಸುತ್ತದೆ.
ಈ ಆ್ಯಪ್ ದೂರು ಸಲ್ಲಿಸಲು ಮಾತ್ರವಲ್ಲದೆ, ತಂಬಾಕು ಬಳಕೆಯ ದುಷ್ಪರಿಣಾಮಗಳ ಕುರಿತ ಮಾಹಿತಿ ಮತ್ತು ಜಾಗೃತಿ ಸಂದೇಶಗಳನ್ನು ಕೂಡ ತೋರಿಸಲಿದೆ. ತಂಬಾಕು ನಿಷೇಧದ ಪೋಸ್ಟರ್ಗಳನ್ನು ಸಹ ಪ್ರದರ್ಶಿಸಲಿದ್ದು, ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ಅಂಗಡಿಗಳ ಮುಂದೆ ಕೂಡ ಹಾಕಬಹುದಾಗಿದೆ.
2019ರಲ್ಲಿ ಹತ್ತು ಜಿಲ್ಲೆಗಳಲ್ಲಿ ಇದನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿದ್ದರು ಕೂಡ ಕೋವಿಡ್ನಿಂದಾಗಿ ಅದಕ್ಕೆ ಹಿನ್ನಡೆಯಾಗಿತ್ತು. ಆಗ ಇ-ಮೇಲ್ ಮೂಲಕ ಸಂದೇಶ ಕಳುಹಿಸಬೇಕಾಗಿತ್ತು. ಈಗ ಜಿಪಿಎಸ್ ಅಳವಡಿಕೆ ಮಾಡಲಾಗಿದ್ದು, ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಜಾರಿಗೆ ತರ ಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಹೆಲ್ತ್ ಇನ್ಸ್ಪೆಕ್ಟರ್, ಪಿಡಿಒ ಹಾಗೂ ಇಬ್ಬರು ಪೊಲೀಸರನ್ನು ಒಳಗೊಂಡ ಸ್ಕಾವಡ್ ರಚನೆ ಮಾಡಲಾಗಿದ್ದು, ಆ್ಯಪ್ ಮೂಲಕ ಬರುವ ಸಂದೇಶವನ್ನು ಆಧರಿಸಿಕೊಂಡು ನಿರ್ದಿಷ್ಟ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಾಗುತ್ತದೆ.
ಈ ನಿಯಮದ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಅಂತಹ ಸ್ಥಳದ ಛಾಯಾಚಿತ್ರ ತೆಗೆದು ‘ಸ್ಟಾಪ್ ಟೊಬ್ಯಾಕೋ’ ಆಪ್ಗೆ ರವಾನಿಸಿದರೆ, ತಂಬಾಕು ನಿಯಂತ್ರಣಾ ಸ್ಕಾವಡ್ ನಿರ್ದಿಷ್ಟ ಸ್ಥಳಕ್ಕೆ ತೆರಳಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಅಗತ್ಯ ಕಂಡು ಬಂದರೆ ಶಿಸ್ತು ಕ್ರಮ ಕೂಡ ಕೈಗೊಳ್ಳಲಾಗುತ್ತದೆ.
ಆ್ಯಪ್ ನಲ್ಲಿ ಬಂದ ದೂರಿನ ಅನ್ವಯ ತಂಬಾಕು ನಿಯಂತ್ರಣಾ ಸ್ಕಾವಡ್ ತೆರಳಿದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಅಂದರೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದರೆ ಅಂತಹ ಪ್ರತಿ ವ್ಯಕ್ತಿಗೆ 200 ರೂ. ದಂಡ ವಿಧಿಸಲಾಗುತ್ತದೆ. ಅವರಿಗೆ ಅಂಗಡಿಯ ಎದುರು ಧೂಮಪಾನ ಮಾಡಲು ಅವಕಾಶ ನೀಡಿದ ಅಂಗಡಿ ಮಾಲೀಕನಿಗೂ ಕೂಡ ದಂಡ ವಿಧಿಸಲಾಗುತ್ತದೆ.
ದಂಡದ ರಶೀದಿ ನೀಡಲು ಎಲೆಕ್ಟ್ರಾನಿಕ್ ಬಿಲ್ಲಿಂಗ್ ಯಂತ್ರ ನೀಡಲು ನಿರ್ಧರಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರದಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಆಯಾ ದಿನದ ದಂಡ ವಸೂಲಿಯ ವಿವರ ಅಂದೇ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಹಾಗಾಗಿ, ನೀವು ಕೂಡ ಸಾರ್ವಜನಿಕ ವಲಯದಲ್ಲಿ ಸಿಗರೇಟ್ ಸೇದುವ ಹವ್ಯಾಸವಿದ್ದರೆ ಈ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.