ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆ ಹೇಗೆ?? ಇದರ ಡೀಟೇಲ್ಸ್ ಇಲ್ಲಿದೆ

ಕರ್ನಾಟಕ ಸರ್ಕಾರವು ಕರ್ನಾಟಕ ಕಾರ್ಮಿಕ ಕಾರ್ಡ್‌ಗಳ (Labour Card) ನೋಂದಣಿಗಾಗಿ ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದ್ದು, ಎಲ್ಲಾ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಈ ಪೋರ್ಟಲ್ ಅನ್ನು ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ವಿನ್ಯಾಸ ಮಾಡಿದೆ.
ಈ ಆನ್‌ಲೈನ್ ಇ-ಲೇಬರ್ ಪೋರ್ಟಲ್ ಮೂಲಕ, ಕಾರ್ಮಿಕರು ಆನ್‌ಲೈನ್ ಸೇವೆಗಳ ಅನುಕೂಲಗಳನ್ನು ಪಡೆಯಬಹುದಾಗಿದೆ. ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದ್ದು, ಲೇಬರ್ ಕಾರ್ಡ್‌ಗಳ ಪ್ರಯೋಜನ ಪಡೆಯುವ ಸಲುವಾಗಿ ಓಡಾಡುವ ಸಮಯವನ್ನು ತಪ್ಪಿಸಲು ರೂಪಿಸಲಾಗಿದೆ. ಹೀಗಾಗಿ, ಅರ್ಹ ಎಲ್ಲ ಸೌಲಭ್ಯಗಳನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಹೆಚ್ಚಿನವರು ಕಾರ್ಮಿಕ ಕಾರ್ಡನ್ನು ಹೊಂದಿದ್ದು, ಆದರೆ, ಅದರಿಂದ ಸಿಗುವಂತ ಸೌಲಭ್ಯಗಳ ಬಗ್ಗೆ ಅವರಿಗೆ ಸಂಪೂರ್ಣವಾದ ಮಾಹಿತಿ ಇಲ್ಲದೇ ಇರುವುದರಿಂದ ಹಲವಾರು ಜನರು ತಮ್ಮ ಬಳಿ ಕಾರ್ಮಿಕ ಕಾರ್ಡ್ ಇದ್ದರೂ ಅದರ ಪ್ರಯೋಜನವನ್ನು ಪಡೆಯದೆ ಸರ್ಕಾರದಿಂದ ದೊರಕುವಂತಹ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ಮೊದಲು ಲೇಬರ್ ಕಾರ್ಡ್ ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈಗ ಯಾವುದೇ ಕಛೇರಿಗೆ ಅಲೆದಾಡದೇ ಇ-ಲೇಬರ್ ಪೋರ್ಟಲ್ (e-labour portal) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಾಗಾದ್ರೆ, ಇ-ಲೇಬರ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್ ನೋಂದಣಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಎರಡು ರೀತಿಯ ಕಾರ್ಮಿಕ ಕಾರ್ಡ್‌ಗಳನ್ನು ನೀಡಲಾಗಿದೆ. ಬಿಲ್ಡಿಂಗ್ ಕಾರ್ಡ್ ಮತ್ತು ಸಾಮಾಜಿಕ ಕಾರ್ಡ್ ಎಂದು ವಿಭಜಿಸಲಾಗಿದೆ. ಪರವಾನಗಿ ಪಡೆದ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವವರಿಗೆ ಬಿಲ್ಡಿಂಗ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಕೃಷಿ ಹಾಗೂ ಇತ್ಯಾದಿ ಕಟ್ಟಡೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಸಾಮಾಜಿಕ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಕಾರ್ಡ್ ಹೊಂದಿರುವವರು ಆರೋಗ್ಯ ವಿಮೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಫೋಟೊ,
ಪಡಿತರ ಚೀಟಿ ಈ ಎಲ್ಲ ದಾಖಲೆಗಳು ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿವೆ.
ಕಾರ್ಮಿಕ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ, ‘ಆನ್‌ಲೈನ್ ನೋಂದಣಿ ಮತ್ತು ನವೀಕರಣ’ ಟ್ಯಾಬ್ ಆಯ್ಕೆಮಾಡಬೇಕು. ಸ್ಕ್ರೀನ್ ಮೇಲೆ ಕಾಣಿಸುವ ‘ಕಾರ್ಮಿಕ ಕಾಯಿದೆ ನಿರ್ವಹಣೆ’ ಪೇಜ್‌ನಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಓದಬೇಕು. ಪೋರ್ಟಲ್‌ನಲ್ಲಿ ನೋಂದಾಯಿಸಲು ‘ಹೊಸ ನೋಂದಣಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು.
ಅಗತ್ಯವಿರುವ ವಿವರಗಳನ್ನು ಒದಗಿಸುವ ಮೂಲಕ ನಿಮಗಾಗಿ ‘ಬಳಕೆದಾರ ಐಡಿ’ ಮತ್ತು ‘ಪಾಸ್‌ವರ್ಡ್’ ಅನ್ನು ರಚಿಸಬೇಕು. ಈ ಬಳಿಕ, ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಬೇಕು. ಅಗತ್ಯವಿರುವ ಎಲ್ಲಾ ವಿವರಗಳನ್ನು ಪೂರ್ಣಗೊಳಿಸಬೇಕು. ಅಗತ್ಯವಿರುವ ಎಲ್ಲಾ ಮಾನ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿಯನ್ನು ಪೂರ್ಣಗೊಳಿಸಿದ ಬಳಿಕ, ಅದನ್ನು ಸಲ್ಲಿಸಬೇಕು ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕಾರ್ಮಿಕ ಕಾರ್ಡ್ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಬೇಕು.
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಆ ಬಳಿಕ, ಕಾರ್ಮಿಕ ನೋಂದಣಿ ಸ್ಥಿತಿಯನ್ನು ತಿಳಿಯಲು ಕ್ಲಿಕ್ ಮಾಡಬೇಕು. ಸ್ಟೇಟಸ್ ಅನ್ನು ಚೆಕ್ ಮಾಡಲು ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬಹುದಾಗಿದ್ದು, ‘ಕ್ಯಾಪ್ಚಾ’ ಅನ್ನು ನಮೂದಿಸಬೇಕು. ಕೊನೆಗೆ ‘ಸರ್ಚ್’ ಟ್ಯಾಬ್ ಆಯ್ಕೆ ಮಾಡಬೇಕು. ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಕಾರ್ಡಿನ ಸ್ಥಿತಿಗತಿ ಪರಿಶೀಲನೆ ಮಾಡಬಹುದು.