ಬಂಟ್ವಾಳ:ರಾಜಕೀಯ ನಾಯಕರ ತಾಳಕ್ಕೆ ವಕೀಲನ ಮೇಲೆಯೇ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್!? ರಾತ್ರೋ ರಾತ್ರಿ ಮನೆಗೆ ನುಗ್ಗಿದ ಪುಂಜಾಲಕಟ್ಟೆ ಎಸ್.ಐ ವಿರುದ್ಧ ವಕೀಲರ ಸಂಘದ ಆಕ್ರೋಶ-ಪ್ರತಿಭಟನೆಗೆ ಸಿದ್ಧತೆ!!
ಪುಂಜಾಲಕಟ್ಟೆ:ಇಲ್ಲಿನ ಠಾಣಾ ವ್ಯಾಪ್ತಿಯ ವಕೀಲರೊಬ್ಬರ ಮನೆಗೆ ರಾತ್ರೋ ರಾತ್ರಿ ನುಗ್ಗಿ ಮನೆ ಮಂದಿಯನ್ನು ನಿಂದಿಸಿ, ವಕೀಲರನ್ನೇ ಠಾಣೆಗೆ ಎಳೆದೊಯ್ದು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಆರೋಪವೊಂದು ಕೇಳಿ ಬಂದಿದ್ದು, ಪ್ರಕರಣ ರಾಜ್ಯದಲ್ಲೇ ಸಂಚಲನ ಮೂಡಿಸುತ್ತಾ ಪೊಲೀಸ್ ಅಧಿಕಾರಿಯ ಅಮಾನತಿನ ಆಗ್ರಹದೊಂದಿಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿದೆ.
ಏನಿದು ಪ್ರಕರಣ!?
ಮಂಗಳೂರಿನ ಯುವ ವಕೀಲರಾದ ಕುಲ್ ದೀಪ್ ಶೆಟ್ಟಿ ಎಂಬವರ ಜಾಗದ ವಿಚಾರದಲ್ಲಿ ತಗಾದೆಯೊಂದು ಎದ್ದಿದ್ದು,ಬಳಿಕ ಠಾಣೆಯ ಮೆಟ್ಟಿಲೇರಿತ್ತು ಎನ್ನಲಾಗಿದೆ.ಬಳಿಕ ವಿಷಯ ರಾಜಕೀಯವಾಗಿ ಮುಂದುವರಿದಿದ್ದು,ವಕೀಲರ ವಿರುದ್ಧ ರಾಜಕೀಯ ನಾಯಕರುಗಳು ಪೊಲೀಸರಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಬಳಿಕ ಪುಂಜಾಲ ಕಟ್ಟೆ ಠಾಣಾಧಿಕಾರಿ ರಾತ್ರೋ ರಾತ್ರಿ ವಕೀಲ ಕುಲ್ ದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದು,ಮನೆಮಂದಿಯನ್ನು ನಿಂದಿಸಿದಲ್ಲದೇ,ಓರ್ವ ವಕೀಲ ಎನ್ನುವ ಗೌರವವನ್ನೂ ಕೂಡಾ ನೀಡದೆ ಕಾಲರ್ ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ದು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಪೊಲೀಸರ ದೌರ್ಜನ್ಯಕ್ಕೊಳಗಾದ ವಕೀಲರು ಆಸ್ಪತ್ರೆಗೆ ದಾಖಲಾಗಿದ್ದು,ವಿಚಾರ ತಿಳಿಯುತ್ತಿದ್ದಂತೆ ವಕೀಲರ ಸಂಘವು ಘಟನೆಯನ್ನು ತೀವ್ರವಾಗಿ ಖಂಡಿಸಿದಲ್ಲದೇ,ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಕರ್ತವ್ಯದಿಂದ ಕಿತ್ತೆಸೆದು,ಕಾನೂನು ಕ್ರಮ ಜರುಗಿಸಬೇಕು ಎನ್ನುವ ಆಗ್ರಹದೊಂದಿಗೆ ನಾಳೆ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆದಿದೆ.