ಸಾರ್ವಜನಿಕರೇ ಗಮನಿಸಿ : ‘ನಲ್ಲಿ’ ಸಂಪರ್ಕ ಪಡೆಯುವ ನಿಯಮ ಈಗ ಮತ್ತಷ್ಟು ಸರಳ
ರಾಜ್ಯದ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಅಮೃತ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದೀಗ ನಲ್ಲಿ ಸಂಪರ್ಕ ಪಡೆಯುವ ಕುರಿತಂತೆ ಇದ್ದ ನಿಯಮಗಳನ್ನು ಮತ್ತಷ್ಟು ಸರಳಗೊಳಿಸಲು ಪೌರಾಡಳಿತ ಇಲಾಖೆ ಮುಂದಾಗಿದ್ದು, ಆಧಾರ್ ಮತ್ತು ಪ್ರಮಾಣ ಸಲ್ಲಿಸಿದರೆ ನಲ್ಲಿ ಸಂಪರ್ಕ ನೀಡಲಾಗುತ್ತದೆ.
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಈ ಕುರಿತಂತೆ ಮಾಹಿತಿ ನೀಡಿದ್ದು, ಒಂದೊಮ್ಮೆ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸೂಕ್ತ ದಾಖಲೆ ಹೊಂದಿರದ ಮನೆ ಮಾಲೀಕರು, ಬಾಡಿಗೆದಾರರು ಹಾಗೂ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ನಿಯಮಗಳನ್ನು ಸರಳೀಕರಣಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.