ವಿದ್ಯಾರ್ಥಿಗಳಿಂದ ಶಿಕ್ಷಕಿಗೆ ಲೈಂಗಿಕ ಕಿರುಕುಳ ಯತ್ನ | “ಐ ಲವ್ ಯು ಮೇರಿ ಜಾನ್” ಹೇಳಿದ ವಿದ್ಯಾರ್ಥಿಗಳ ಬಂಧನ!
ಇಲ್ಲಿಯವರೆಗೆ ಟೀಚರ್ ಹೊಡೆದರೆಂದು ಮಕ್ಕಳು ಪೋಷಕರಲ್ಲಿ ದೂರು ಹೇಳುತ್ತಿದ್ದರು. ಪೋಷಕರು ಶಾಲೆಗೆ ಬಂದು ಶಾಲೆಯಲ್ಲಿ ಗಲಾಟೆ ಮಾಡಿದ ಹಲವು ವರದಿಗಳನ್ನು ನಾವು ಓದಿದ್ದೇವೆ, ಕಂಡಿದ್ದೇವೆ. ಆದರೆ ಈಗ ಉತ್ತರಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದಡಿ ಹಾಗೂ ಐ ಲವ್ ಯು ಹೇಳಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಮೂವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೀರಟ್ ನ ಕಿಥೋರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ವಿದ್ಯಾರ್ಥಿಗಳು ತಾವು ಶಿಕ್ಷಕಿಗೆ ಕಿರುಕುಳ ನೀಡಿದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಗುರು, ಶಿಕ್ಷಕಿಯನ್ನು “ಜಾನ್” ಎಂದು ವಿದ್ಯಾರ್ಥಿಗಳು ಹೇಳುತ್ತಿರುವುದು ಹಾಗೂ ಐ ಲವ್ ಯು ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಅರವಿಂದ್ ಮೋಹನ್ ಶರ್ಮಾ ಮಾಹಿತಿ ನೀಡಿದ್ದು, ಒಬ್ಬಳು ವಿದ್ಯಾರ್ಥಿನಿ ಸೇರಿದಂತೆ ಒಟ್ಟು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್, 354, 500 ಹಾಗೂ 67 ರ ಅಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (Information Technology Act) ದಾಖಲು ಮಾಡಲಾಗಿದೆ. ಮಕ್ಕಳ ಕಿರುಕುಳದಿಂದ ತಾನು ಖಿನ್ನತೆಗೆ ಒಳಗಾಗಿದ್ದಾಗಿ ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಗೆ ತರಗತಿ ನಡೆಸುತ್ತಿರುವಾಗಲೇ ಐಲವ್ ಯೂ ಮೇರಿ ಜಾನ್ ಎಂದೆಲ್ಲಾ ಹೇಳಿದ್ದಾರೆ. ಮೂವರು ವಿದ್ಯಾರ್ಥಿಗಳು ಶಿಕ್ಷಕಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ಒಬ್ಬನಂತೂ ಬಾಯಲ್ಲಿ ಲಾಲಿಪಾಪ್ ಇರಿಸಿಕೊಂಡು ಶಿಕ್ಷಕಿಯತ್ತ ಅಸಭ್ಯ ವರ್ತನೆ ತೋರಿದ್ದಾನೆ.
ಶಿಕ್ಷಕಿ (20 ವರ್ಷ) 12 ನೇ ತರಗತಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಳೆದ ಕೆಲವು ವಾರಗಳಿಂದ ತಮಗೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಶಾಲೆಗೆ ಬರುವಾಗ ಮನೆಗೆ ಹೊರಡುವಾಗ ವಿದ್ಯಾರ್ಥಿಗಳು ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಈ ಶಿಕ್ಷಕಿ ಪೊಲೀಸರಿಗೆ ದೂರು ನೀಡುವುದಕ್ಕೂ ಮುನ್ನ ವಿದ್ಯಾರ್ಥಿಗಳ ಪೋಷಕರಿಗೆ ಕೂಡಾ ಮೊದಲು ಈ ಬಗ್ಗೆ ದೂರು ನೀಡಿದ್ದರಂತೆ. ಆದರೆ ಇದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.
ಇದುವರೆಗೆ ವಿದ್ಯಾರ್ಥಿಗಳ ಕಿರುಕುಳವನ್ನು ಸಹಿಸಿಕೊಂಡಿದ್ದ ಶಿಕ್ಷಕಿ ಮಕ್ಕಳು ತಮ್ಮ ಮಿತಿಯನ್ನು ಮೀರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದಂತೆ ಮಾನಕ್ಕೆ ಅಂಜಿ ವಿದ್ಯಾರ್ಥಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈಗ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಂತ ಕಾಲ ಬಂತು, ಪಾಠ ಕಲಿಸೋ ಗುರುಗಳಿಗೇ ವಿದ್ಯಾರ್ಥಿಗಳು ಅಸಭ್ಯ ವರ್ತನೆ ಮಾಡೋದನ್ನು ನೋಡಿದರೆ ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ಮೊದಲು ಸಂಸ್ಕಾರ ಕಲಿಸೋದು ಮುಖ್ಯ ಎಂದು ಅನಿಸುತ್ತದೆ.