ಉಡುಪಿಯಲ್ಲೂ ಶಾರೀಕ್ ಹೆಜ್ಜೆ| ಕೃಷ್ಣ ನಗರಿಯಲ್ಲಿ ಶಾರೀಕ್ ಬಾಂಬ್ ಸ್ಕೆಚ್ ಹಾಕಿದ್ನಾ?!
ಈಗಾಗಲೇ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಬಗ್ಗೆ ಕೆಲವೊಂದು ಮಾಹಿತಿಗಳು ಮತ್ತು ಸಾಕ್ಷಿಗಳು ದೊರೆತಿದೆ.
ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಕಾರ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ ಎಂಬ ಮಾಹಿತಿ ನೀಡಿದ್ದಾರೆ. ಅದಲ್ಲದೆ ಶಂಕಿತ ಉಗ್ರ ಶಾರಿಕ್, ನಕಲಿ ದಾಖಲೆ ನೀಡಿ ಮನೆ ಬಾಡಿಗೆ ಪಡೆದಿದ್ದ ಎಂದು ತಿಳಿದು ಬಂದಿದೆ.
ಆದರೆ ಇದರ ಹೊರತು ಶಾರೀಕ್ ಕೃಷ್ಣ ನಗರಿಯಲ್ಲೂ ಸಂಚಾರಿಸಿದ್ದಾನೆ ಎಂದು ತಿಳಿದು ಬಂದಿದೆ. ಹೌದು ಉಡುಪಿಯ ಶ್ರೀಕೃಷ್ಣ ಮಠದ ಆಸು-ಪಾಸು ಓಡಾಡಿದ್ದ ಶಾರೀಕ್, ರಥಬೀದಿಯಲ್ಲಿ, ನಗರದ ಬಸ್ ನಿಲ್ದಾಣದಲ್ಲೆಲ್ಲಾ ಅಡ್ಡಾಡಿದ್ದ ಎಂದು ಸಾಬೀತು ಆಗಿದೆ.
ಶಂಕಿತ ಉಗ್ರ ಶಾರೀಕ್ ಸದ್ಯ ಆಸ್ಪತ್ರೆ ಬೆಡ್ ಮೇಲೆ ಬಿದ್ದಿರೋ ಪಾಪಿ ವಿಚಾರಣೆಗೆ ಸಹಕರಿಸೋ ಸ್ಥಿತಿಯಲ್ಲಂತೂ ಇಲ್ಲ. ಸದ್ಯ ಶಾರೀಕ್‍ನ ಮೊಬೈಲ್ ಹಿನ್ನೆಲೆ ಹಿಡಿದು ಹೊರಟ ಪೊಲೀಸರಿಗೆ ಕೃಷ್ಣ ನಗರಿಯ ಅಡ್ರೆಸ್ ಸಿಕ್ಕಿದೆ.
ಶಂಕಿತ ಉಗ್ರ ಶಾರೀಕ್ 2022ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮಠ ಹಾಗೂ ಉಡುಪಿಯ ರಥಬೀದಿಯಲ್ಲಿ ಸಂಚಾರ ಮಾಡಿರುವ ಮಾಹಿತಿ ಸಿಕ್ಕಿದೆ. ಈ ಆಧಾರದಲ್ಲಿ ಮಂಗಳೂರು ಪೋಲಿಸರ ತಂಡ ಉಡುಪಿ ಶ್ರೀ ಕೃಷ್ಣ ಮಠ, ರಥಬೀದಿ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ. ಉಡುಪಿ ರಥಬೀದಿಯಲ್ಲಿ ಶಾರೀಕ್ ಸುತ್ತಾಡುತ್ತಿದ್ದ ವೇಳೆ ಇಲ್ಲಿಂದಲೇ ಕೆಲವರಿಗೆ ಫೋನ್ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.
ಪ್ರಸ್ತುತ ಶ್ರೀಕೃಷ್ಣ ಮಠಕ್ಕೂ ಉಗ್ರ ಶಾರೀಕ್ ಭೇಟಿ ನೀಡಿದ್ದ ಎಂಬ ವಿಚಾರ ತಿಳಿಯಿತೋ ಉಡುಪಿಯ ರಥಬೀದಿ ಹಾಗೂ ಉಡುಪಿ ನಾಗರಿಕರಲ್ಲಿ ಆತಂಕ ಮೂಡಿದೆ. ಹಾಗೆ ಶ್ರೀಕೃಷ್ಣ ಮಠಕ್ಕೆ ಭದ್ರತೆಯನ್ನು ಹೆಚ್ಚಿಸಬೇಕು, ಸರ್ಕಾರವೂ ಉನ್ನತ ತಂಡದಿಂದ ಭದ್ರತಾ ಸರ್ವೆ ನಡೆಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಉಡುಪಿಯ ಜನರು ಆಗ್ರಹಿಸಿದ್ದಾರೆ.
ಪೊಲೀಸರಿಗೆ ಶ್ರೀಕೃಷ್ಣ ಮಠದಲ್ಲಿ ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಗಳು ಲಭಿಸದ ಕಾರಣ ಇನ್ನೂ ಹೆಚ್ಚಿನ ಮಾಹಿತಿಗಾಗಿ ಭದ್ರತಾ ಪಡೆ ಹರ ಸಾಹಸ ಪಡುತ್ತಿದೆ. ಸದ್ಯ ಉಡುಪಿಯ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.