ದೈವರಾಧನೆ ಕುರಿತ ಸಿನಿಮಾ ಮಾಡಿದರೆ ಆಕ್ಷೇಪ ಖಂಡಿತ | ಮುಲಾಜಿಲ್ಲದೇ ವಿರೋಧಿಸುವುದಾಗಿ ದೈವಾರಾಧಕರ ಎಚ್ಚರಿಕೆ

ಮಂಗಳೂರು: ಕಾಂತಾರ ಸಿನಿಮಾ ದೈವದ ಆಶೀರ್ವಾದದಿಂದ ಪ್ರಾರಂಭವಾದ ಸಿನಿಮಾ. ಹಾಗಾಗಿ ಭಾರೀ ಯಶಸ್ಸನ್ನು ದೇಶ, ವಿದೇಶದಾದ್ಯಂತ ಪಡೆಯಿತು‌. ಈ ದಿನದವರೆಗೂ ಎಲ್ಲರ ಬಾಯಲ್ಲಿ ಕಾಂತಾರ ಸಿನಿಮಾದ್ದೇ ಮಾತಿದೆ. ಈ ಸಿನಿಮಾ ಮಾಡಿದ ಜನಪ್ರಿಯತೆಯನ್ನು ನೋಡಿ ಕೆಲವೊಂದು ಜನರು ದೈವದ ಹೆಸರಿನಲ್ಲಿ ಹಣ ಮಾಡಲು, ಪಾಪದ ವ್ಯಕ್ತಿಗಳಿಂದ ಹಣ ವಸೂಲಿ ಮಾಡಲು ಹೋಗಿರುವ ಅನೇಕ ವರದಿಗಳು ಬೆಳಕಿಗೆ ಬಂದಿದ್ದವು.

ಅಷ್ಟು ಮಾತ್ರವಲ್ಲದೇ, ತುಳುನಾಡಿನ ದೈವಾರಾಧನೆ ಹೆಸರಿನಲ್ಲಿ ಮತ್ತಷ್ಟು ಸಿನಿಮಾ ತೆಗೆಯುವಂತಹ ಇಂಗಿತವನ್ನು ಅನೇಕರು ಕಾಂತಾರ ಚಿತ್ರದ ನಂತರ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತದೆ. ಈ ಹಿನ್ನಲೆಯಲ್ಲಿ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧ ದೈವಾರಾಧಕರು ತೊಡೆತಟ್ಟಿ ನಿಂತಿದ್ದಾರೆ.

ಅದೇ ದೈವಾರಾಧನೆ ಸಿನಿಮಾ ಮಾಡಿದ್ರೆ, ಮುಲಾಜಿಲ್ಲದೇ ವಿರೋಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ಮುಂದೆ ವ್ಯಾಪಾರದ ಹೆಸರಿನಲ್ಲಿ ದೈವಾರಾಧನೆಯನ್ನು ನಡೆಸಿದರೆ ಕಾನೂನು ಕ್ರಮ ಹಾಗೂ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ದೇವಾರಾಧಕರು ಹೇಳಿದ್ದಾರೆ. ಅಲ್ಲದೇ ದೈವಾರಾಧನೆ ಸಿನಿಮಾ ಮಾಡಿದರೆ ವಿರೋಧಿಸುವುದಾಗಿ ಹೇಳಿದ್ದಾರೆ.

ದೈವದ ಕೋಲಾ ಸೇವೆಯ ಹೆಸರಿನಲ್ಲಿ ಲಕ್ಷಾಂತರ ಲೂಟಿ ಮಾಡಿರೋದಾಗಿಯೂ ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನಾ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪ ಮಾಡಿದೆ.

ಇಂದು ಮಂಗಳೂರಿನ ಕುತ್ತಾರು ಬಳಿಯ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಮಿತಿಗಳು ಸಲ್ಲಿಸಿದವು. ಈ ಸಂದರ್ಭದಲ್ಲಿಯೇ ದೈವಾರಾಧಕರು ತುಳುನಾಡ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವುದು ಸರಿಯಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.

Leave A Reply

Your email address will not be published.