‘ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗೇ ಕಾಣುತ್ತಾರೆ’: ಬಾಬಾ ರಾಮ್ ದೇವ್ ವಿವಾದಾತ್ಮಕ ಹೇಳಿಕೆ!

ಯೋಗ ಗುರು ಬಾಬಾ ರಾಮ್ ದೇವ್ ಮತ್ತೆ ತಮ್ಮ ಮಾತಿನಿಂದ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಾರಿ ಮಹಿಳೆಯ ಬಟ್ಟೆ ವಿಚಾರವಾಗಿ ಮಾತನಾಡಿರುವ ರಾಮ್ ದೇವ್ ಮಹಿಳೆಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

 

“ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದು ಪತಂಜಲಿ (Patanjali) ಯೋಗಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ಥಾಣೆಯಲ್ಲಿ ಆಯೋಜಿಸಿದ್ದ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಾಬಾ ರಾಮ್ ದೇವ್ ಹೇಳಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಈ ಸಂದರ್ಭದಲ್ಲಿ ಇದ್ದರು. ಬಾಬಾ ರಾಮದೇವ್ ಅವರ ಈ ಹೇಳಿಕೆಯಿಂದ ವೇದಿಕೆಯಲ್ಲಿದ್ದವರು ಮುಜುಗರಕ್ಕೀಡಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಮಹಿಳೆಯರು ಯೋಗ ಮಾಡಲೆಂದು ಉಡುಪುಗಳನ್ನು ತಂದಿದ್ದರು. ಹಾಗೆನೇ ಕೆಲವರು ಸೀರೆಯುಟ್ಟು ಬಂದಿದ್ದರು. ಹಾಗೆನೇ ಇನ್ನೂ ಕೆಲವರಿಗೆ ಯೋಗದ ಬಳಿಕ ಸೀರೆಯುಡಲು ಸಮಯ ಇರದ ಕಾರಣ ಯೋಗದ ಡ್ರೆಸ್‌ನಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಇದನ್ನು ತಮಾಷೆಯಾಗಿ ಮಾತನಾಡಿದ ಬಾಬಾ ರಾಮದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ನನ್ನ ಹಾಗೆಯೇ ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದಿದ್ದಾರೆ.

ಆದರೆ ಇದೀಗ ರಾಮ್ ದೇವ್ ಅವರ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.

Leave A Reply

Your email address will not be published.