ಶೀಘ್ರವೇ Google Pay, Paytm ಗೆ ಬೀಳಲಿದೆ ಕಡಿವಾಣ? ಏನದು, ಈ ಹೊಸ ರೂಲ್ಸ್?
ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮೊಬೈಲ್ ಎಂಬ ಒಂದು ಸಾಧನ ಹಿಡಿದು ಎಲ್ಲಿಂದ ಎಲ್ಲಿಗೆ ಬೇಕಾದರು ಹಣ ವರ್ಗಾವಣೆ, ಪಾವತಿ ಮಾಡಬಹುದು.
ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಬ್ಯಾಂಕ್ಗಳು ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಸೌಕರ್ಯಗಳನ್ನು ಮಾಡಿ ಕೊಟ್ಟಿದೆ. ಇಂದು ಡಿಜಿಟಲ್ ಪಾವತಿ ಮಾಡುವ ಪರಿಪಾಠ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದು, ಅದರಲ್ಲಿ ಕೂಡ ಪೇಟಿಎಂ, ಗೂಗಲ್ ಪೇ ಹಾಗೂ ಫೋನ್ ಪೇಯಂತಹ ಆ್ಯಪ್ ಗಳನ್ನು ಜನ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇಲ್ಲಿಯವರೆಗೆ ಸರಾಗವಾಗಿ ಪಾವತಿ ಮಾಡುತ್ತಿದ್ದವರಿಗೆ ಇದೀಗ ಶಾಕ್ ಆಗುವ ವಿಚಾರ ಮುನ್ನಲೆಗೆ ಬಂದಿದೆ.
ಇಲ್ಲಿಯವರೆಗೆ ಈ ಪಾವತಿ ಆ್ಯಪ್ಗಳ ವಹಿವಾಟಿನ ಮೇಲೆ ಯಾವುದೇ ಮಿತಿ ಇರಲಿಲ್ಲ. ಆದರೆ, ಇನ್ನೂ ಮುಂದೆ ಅಂದರೆ, ಶೀಘ್ರದಲ್ಲೇ ವಹಿವಾಟಿನ ಮೇಲೆ ಮಿತಿ ವಿಧಿಸಲು ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಫೋನ್ ಪೇ, ಗೂಗಲ್ ಪೇ , ಪೇಟಿಎಂ ಮುಂತಾದ ಯುಪಿಐ ಪಾವತಿ ಆ್ಯಪ್ ಗಳ ವಹಿವಾಟುಗಳಿಗೆ ಮಿತಿ ವಿಧಿಸುವ ಕುರಿತು ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು (ಎನ್ ಪಿಸಿಐ) ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚನೆ ನಡೆಸಿದೆ.
ಪ್ರಸ್ತುತ ಡಿಜಿಟಲ್ ಪಾವತಿ ಆ್ಯಪ್ ಗಳ ವಹಿವಾಟುಗಳಿಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ ಆದರೆ, ವರದಿಗಳ ಪ್ರಕಾರ ಥರ್ಡ್ ಪಾರ್ಟಿ ಆ್ಯಪ್ ಪೂರೈಕೆದಾರರಿಗೆ (ಟಿಪಿಎಪಿ) ಶೇ.30ರಷ್ಟು ವಹಿವಾಟಿನ ಮಿತಿ ವಿಧಿಸುವಂತೆ ಎನ್ ಪಿಸಿಐ ನವೆಂಬರ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಡಿಜಿಟಲ್ ಪಾವತಿ ಆ್ಯಪ್ ವಲಯದಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಶೇ.80ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಮುಂದೊಂದು ದಿನ ಏಕಸ್ವಾಮ್ಯ ಸೃಷ್ಟಿಯಾಗುವ ಸಾದ್ಯತೆ ಇದೆ ಎಂಬ ಆತಂಕ ಸೃಷ್ಟಿಯಾಗಿದೆ ಎನ್ನಲಾಗಿದೆ.
ಇಲ್ಲಿಯ ತನಕ ಡಿಜಿಟಲ್ ಪಾವತಿ ಆ್ಯಪ್ ಬಳಸಿ ಎಲ್ಲ ಕಡೆ ಪಾವತಿ ಮಾಡಿರುವವರಿಗೆ ಮಿತಿ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಕಿರಿಕಿರಿಯುಂಟಾಗುವ ಸಾಧ್ಯತೆ ದಟ್ಟವಾಗಿದೆ. ನಗದುರಹಿತ ವ್ಯವಹಾರಕ್ಕೆ ಹೊಂದಿಕೊಂಡವರಿಗೆ ಈ ಮಿತಿ ತೊಂದರೆಯುಂಟು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ.
ಡಿಜಿಟಲ್ ಪಾವತಿ ಆ್ಯಪ್ ಗಳ ವಹಿವಾಟುಗಳಿಗೆ ಗರಿಷ್ಠ ಮಿತಿ ವಿಧಿಸುವ ಸಂಬಂಧ ನಡೆದ ಸಭೆಯಲ್ಲಿ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಅಧಿಕಾರಿಗಳ ಜೊತೆಗೆ ಹಣಕಾಸು ಸಚಿವಾಲಯ ಹಾಗೂ ಆರ್ ಬಿಐ ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು ಎನ್ನಲಾಗಿದ್ದು,ಆದರೆ, ಈ ಮಿತಿ ವಿಧಿಸುವ ಕುರಿತಾಗಿ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂಬ ಮಾತು ಕೇಳಿಬರುತ್ತಿದೆ.
2020ರಲ್ಲಿ ಡಿಜಿಟಲ್ ಪಾವತಿ ಆ್ಯಪ್ ಗಳ ವಹಿವಾಟುಗಳಿಗೆ ಶೇ.30ರ ಮಿತಿ ವಿಧಿಸುವ ಕುರಿತು ಎನ್ ಪಿಸಿಐ ಪ್ರಸ್ತಾವನೆ ಸಲ್ಲಿಸಿದ್ದು, 2021ರ ಜನವರಿ 1ರಿಂದ ಇದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ, ಗೂಗಲ್ ಪೇ ಹಾಗೂ ಫೋನ್ ಪೇ ಸೇರಿದಂತೆ ಪ್ರಸ್ತುತವಿರುವ ಡಿಜಿಟಲ್ ಪಾವತಿ ಆ್ಯಪ್ ಗಳಿಗೆ ಮತ್ತೆ ಎರಡು ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು ಎನ್ನಲಾಗಿದೆ. ಯುಪಿಐ ಪಾವತಿ ವ್ಯವಸ್ಥೆಗಳ ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಪ್ರಾರಂಭದಲ್ಲಿ ಸಮಾಲೋಚನ ವರದಿಯನ್ನು ಬಿಡುಗಡೆ ಮಾಡಿದೆ.
ಆದರೆ, ಈ ವರದಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಯುಪಿಐ ಪಾವತಿ ವ್ಯವಸ್ಥೆ ಜನರಿಗೆ ಅನುಕೂಲರವಾಗಿದ್ದು, ಅದರ ಮೇಲೆ ಶುಲ್ಕ ವಿಧಿಸುವ ಯಾವುದೇ ಯೋಚನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಆಗ ಹೇಳಿಕೊಂಡಿತ್ತು.
ಯುಪಿಐ ಪಾವತಿ ಆ್ಯಪ್ ಗಳ ವಹಿವಾಟುಗಳಿಗೆ ಮಿತಿ ಹೇರುವ ಚರ್ಚೆ ಇದೀಗ, ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಡಿಸೆಂಬರ್ 31ರ ಬಳಿಕ ಗೂಗಲ್ ಪೇ, ಪೇಟಿಎಂ ಮುಂತಾದ ಡಿಜಿಟಲ್ ಆ್ಯಪ್ ಗಳ ವಹಿವಾಟುಗಳ ಮೇಲೆ ಮಿತಿ ಬೀಳುವ ಸಾಧ್ಯತೆ ಹೆಚ್ಚಿದೆ.. ಪೇಮೆಂಟ್ ಗೇಟ್ವೇ ಉದ್ಯಮದ ಪ್ರತಿನಿಧಿಗಳು ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು ಈ ತಿಂಗಳ ಅಂತ್ಯದೊಳಗೆ ಎನ್ ಪಿಸಿಐ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಭಾರತದಲ್ಲಿ ನಗದು ಚಲಾವಣೆಯಿಂದ ಡಿಜಿಟಲ್ ಪೇಮೆಂಟ್ ವರ್ಗಾವಣೆ ಪ್ರಮುಖ ಪಾತ್ರ ವಹಿಸುತ್ತವೆ. ಯುಪಿಐ, ವ್ಯಾಲೆಟ್, ಪಿಪಿಐ, ಇಂಟರ್ ಆಪರೇಬಲ್ ಪಾವತಿಗಳಿಂದ ಸುಲಭವಾಗಿ ಹಣ ವರ್ಗಾವಣೆ ವಹಿವಾಟು ನಡೆಸಲು ಅನುಕೂಲಕರ ಮಾಧ್ಯಮವಾಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಮಾತ್ರ ಸೀಮಿತವಾಗಿದ್ದ ಆನ್ಲೈನ್ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಇದೀಗ ಯಾರು ಬೇಕಿದ್ದರೂ ಕೂಡ ಸರಳವಾಗಿ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದಾಗಿದ್ದು,ಡಿಜಿಟಲ್ ಪಾವತಿ ಆ್ಯಪ್ ಗಳು ಭಾರತದಲ್ಲಿ ನಗದುರಹಿತ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.