ಟೀ ಪ್ರಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದ ತಜ್ಞರು!
ಮನುಷ್ಯ ಅಂದಮೇಲೆ ಒಂದಲ್ಲ ಒಂದು ಹವ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಏನಾದರೂ ಬಾಯಿಯಲ್ಲಿ ಜಗಿಯುತ್ತಿರುವ ಹವ್ಯಾಸ ಇರುತ್ತೆ. ಇನ್ನೂ ಕೆಲವರಿಗೆ ಟೀ ಕುಡಿಯುವ ಹವ್ಯಾಸ. ಆದರೆ ಹೆಚ್ಚಾಗಿ ಟೀ ಕುಡಿಯುವ ಹವ್ಯಾಸದಿಂದ ತೊಂದರೆ ಇದೆ ಎಂದು ಸಾಬೀತಾಗಿದೆ
ಸಹಜವಾಗಿ ಚಳಿಗಾಲದಲ್ಲಿ ಟೀ ನಮ್ಮನ್ನು ಆಕರ್ಷಿಸುತ್ತದೆ. ಚಹಾ ಪ್ರಿಯರು ಟೀಯನ್ನು 12 ತಿಂಗಳ ಕಾಲ ಸೇವಿಸುತ್ತಾರೆ.ಚಳಿ ಸಮಯದಲ್ಲಿ ಬೆಚ್ಚಗೆ ಒಂದು ಟೀ ಕುಡಿದಾಗ ಆಗುವ ಖುಷಿಯೇ ಬೇರೆ. ಆದರೆ ಟೀ ಮಾಡುವಲ್ಲಿ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು, ಇಲ್ಲದಿದ್ದರೆ ಮುಂದೊಂದು ದಿನ ಈ ಟೀ ನಿಮಗೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು.
ಆಹಾರ ತಜ್ಞರ ಪ್ರಕಾರ ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೇಹದೊಳಗೆ ಶಾಖವನ್ನು ಉತ್ಪಾದಿಸುತ್ತದೆ. ಚಹಾವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ. ಕೆಲವರು ದಿನಕ್ಕೆ ಹಲವಾರು ಬಾರಿ ಚಹಾ ಕುಡಿಯುತ್ತಾರೆ. ಆದರೆ, ದಿನದಲ್ಲಿ 3 ಕಪ್ ಗಿಂತ ಹೆಚ್ಚು ಟೀ ಕುಡಿಯುವುದು ದೇಹಕ್ಕೆ ಹಾನಿಕಾರಕ ಎನ್ನುತ್ತಾರೆ.
ಸಾಮಾನ್ಯವಾಗಿ ಹಲವಾರು ವಿಧದ ಚಹಾಗಳಿವೆ ಮತ್ತು ಪ್ರತಿ ಚಹಾವನ್ನು ತಯಾರಿಸಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತದೆ. ನೀವು ಹಾಲಿನ ಚಹಾವನ್ನು ಮಾಡುತ್ತಿದ್ದರೆ, ಹಾಲು ಸೇರಿಸಿದ ನಂತರ, ಅದನ್ನು ಕೇವಲ 2 ರಿಂದ 3 ನಿಮಿಷಗಳ ಕಾಲ ಕುದಿಸಬೇಕು. ಚಹಾವನ್ನು ಇದಕ್ಕಿಂತ ಹೆಚ್ಚು ಬಿಸಿ ಮಾಡಿದರೆ ಅದರಲ್ಲಿ ಕಹಿ ಹೆಚ್ಚುತ್ತದೆ. ನೀವು ಹಾಲು ಇಲ್ಲದ ಚಹಾವನ್ನು ಬಯಸಿದರೆ, ಅದನ್ನು 2 ರಿಂದ 3 ನಿಮಿಷಗಳ ಕಾಲ ಮಾತ್ರ ಬಿಸಿ ಮಾಡಿ. ಗ್ರೀನ್ ಟೀ ಕೂಡ 2 ರಿಂದ 3 ನಿಮಿಷ ಮಾತ್ರ ಕುದಿಸಬೇಕು ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.
ಈಗಾಗಲೇ ತಯಾರಿಸಿದ ತಂಪು ಚಹಾವನ್ನು ನೀವು ಮತ್ತೆ ಮತ್ತೆ ಕುದಿಸಿ ಕುಡಿಯುತ್ತಿದ್ದರೆ, ಆ ತಪ್ಪನ್ನು ನೀವು ಅಪ್ಪಿತಪ್ಪಿಯೂ ಮುಂದುವರಿಸಬೇಡಿ. ಆ ರೀತಿ ಕುಡಿಸಿದಲ್ಲಿ ಅದು ಸಿಹಿ ವಿಷಕ್ಕೆ ಸಮಾನ ಎನ್ನುತ್ತಾರೆ ತಜ್ಞರು.
ಪ್ರತಿದಿನ ಪದೇ ಪದೇ ಕುದಿಸಿ ಚಹಾ ಮಾಡಿದರೆ, ನಿಮಗೆ ಅತಿಸಾರ, ವಾಂತಿ, ಹೊಟ್ಟೆ ನೋವು, ಎದೆಯುರಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಕರುಳನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಆದ ಕಾರಣ ಅಪ್ಪಿತಪ್ಪಿಯೂ ತಣ್ಣಗಾದ ಟೀ ಯನ್ನು ಮತ್ತೆ ಕುದಿಸಬಾರದು. ಚಹಾವನ್ನು 15 ನಿಮಿಷಗಳ ಹಿಂದೆ ತಯಾರಿಸಿದರೆ, ಅದನ್ನು ಬಿಸಿ ಮಾಡಬಹುದು. ಆದರೆ, ಅದಕ್ಕಿಂತ ಹೆಚ್ಚು ಸಮಯದ ಚಹಾವನ್ನು ಉಪಯೋಗಿಸದೆ ಇರುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ಇನ್ನೊಂದೆಡೆ ಸ್ಟ್ರಾಂಗ್ ನೆಸ್ ಗಾಗಿ ಚಹಾವನ್ನು ಬಹಳ ಹೊತ್ತು ಕುದಿಸಿ ಕುಡಿಯುವವರು ಹಲವು ಮಂದಿ ಇದ್ದಾರೆ. ಆದರೆ ಇದರಿಂದ ಅವರ ಆರೋಗ್ಯಕ್ಕೂ ಸಾಕಷ್ಟು ಹಾನಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ.