ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ನೀರನ್ನೇ ಖಾಲಿ ಮಾಡಿದ್ರು, ನಂತ್ರ ಗೋಮೂತ್ರದಿಂದ ಶುದ್ಧೀಕರಿಸಿದ ಗ್ರಾಮಸ್ಥರು !

Share the Article

ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಇಡೀ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೀರಶೈವ ಬೀದಿಯಲ್ಲಿ ದಲಿತ ಮಹಿಳೆಯೊಬ್ಬರು ರಸ್ತೆ ಬದಿ ಇದ್ದ ಟ್ಯಾಂಕ್ ನೀರು ಕುಡಿದಿದ್ದರು. ಈ ಕಾರಣಕ್ಕೆ ನೀರನ್ನು ಖಾಲಿ ಮಾಡಿ, ಟ್ಯಾಂಕ್’ಗೆ ಗೋಮೂತ್ರ ಸಿಂಪಡಿಸಿ ಸ್ವಚ್ಛ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋ ವೈರಲ್ ಆಗಿದೆ.

ಆ ಗ್ರಾಮದಲ್ಲಿ ಮೊನ್ನೆ ಶುಕ್ರವಾರ ನಡೆದ ದಲಿತರ ವಿವಾಹದ ವೇಳೆ ಈ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನ ವಧುವಿನ ಸಂಬಂಧಿಕರು ಸಮಾರಂಭಕ್ಕೆ ಗ್ರಾಮಕ್ಕೆ ಆಗಮಿಸಿದ್ದರು. ಆಹಾರ ಸೇವಿಸಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬರು ಲಿಂಗಾಯತ ಬೀದಿಯ ಟ್ಯಾಂಕ್‌ನಿಂದ ನೀರು ಕುಡಿದಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ಇತರರನ್ನು ಕರೆದು ಟ್ಯಾಂಕ್‌ನಲ್ಲಿನ ನೀರನ್ನು ಮೈಲಿಗೆ ಮಾಡಿದ್ದಕ್ಕಾಗಿ ಮಹಿಳೆಯನ್ನು ನಿಂದಿಸಿದ್ದಾರೆ. ಮಹಿಳೆ ಗ್ರಾಮವನ್ನು ತೊರೆದ ನಂತರ, ಲಿಂಗಾಯತ ಬೀದಿ ನಿವಾಸಿಗಳು ಟ್ಯಾಂಕ್‌ನ ನಲ್ಲಿಗಳನ್ನು ತೆರೆದು, ಎಲ್ಲಾ ನೀರನ್ನು ಚೆಲ್ಲಿದ್ದಾರೆ. ನಂತರ ಅದನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿವರ ಸಂಗ್ರಹಿಸಿ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.

ಘಟನೆ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಎಸ್‌ಸಿ ಯುವಕರು ದೂರು ನೀಡಿದರು. ಚಾಮರಾಜನಗರ ತಹಶೀಲ್ದಾರ್ ಐ.ಇ.ಬಸವರಾಜ್ ಅವರು ಹೇಳಿಕೆ ನೀಡಿ, ಅಧಿಕಾರಿಗಳಿಂದ ವಿವರ ಸಂಗ್ರಹಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave A Reply