Delhi Shraddha Murder Case : ನಾಳೆ ಆರೋಪಿ ಅಫ್ತಾಬ್‌ ಮಂಪರು ಪರೀಕ್ಷೆ

ಈಗಾಗಲೇ ಇಡೀ ದೇಶವೇ ಬೆಚ್ಚಿ ಬಿದ್ದ ಫಟನೆಯಾದ ಶ್ರದ್ಧಾ ವಾಲ್ಕರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ದೆಹಲಿ ನ್ಯಾಯಾಲಯವು ಆದೇಶ ನೀಡಿದೆ.

 

ಶ್ರದ್ಧಾ ರೀತಿ ಮನೆಯಿಂದ ಓಡಿಬಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಯುವತಿಯರ ನೆರವಿಗಾಗಿ ರಾಜ್ಯ ಮಹಿಳಾ ಆಯೋಗದಡಿಯಲ್ಲಿ ಸ್ಕ್ವಾಡ್‌ ರಚಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ಮಹತ್ವದ ಮಾಹಿತಿಯನ್ನು ಸಹ ಬಹಿರಂಗ ಪಡಿಸಲಾಗಿದೆ.

ಪ್ರಸ್ತುತ ದೆಹಲಿ ನ್ಯಾಯಾಲಯವು ಮಂಗಳವಾರದವರೆಗೆ ಆರೋಪಿ ಅಫ್ತಾಬ್‌ನನ್ನು ಪೊಲೀಸರ ವಶಕ್ಕೆ ನೀಡಿದೆ. ಇದರ ಒಳಗೆ ಮಂಪರು ಪರೀಕ್ಷೆ ಕೈಗೊಳ್ಳಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ವಿಚಾರಣೆ ಮಾಡಲು ಮತ್ತಷ್ಟು ದಿನಗಳು ಆತನನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರ್ಟ್‌ ಎದುರು ಪೊಲೀಸರು ಮನವಿ ಮಾಡುವ ನಿಟ್ಟಿನಲ್ಲಿ ಇದ್ದಾರೆ.

ಅಧಿಕಾರಿಗಳ ಪ್ರಕಾರ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ನವದೆಹಲಿಯ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಸೋಮವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ ಅಕ್ಟೊಬರ್ 18 ರಂದು ಬೆಳಗಿನ ಜಾವ ಅಫ್ತಾಬ್‌ ತನ್ನ ಮನೆಯ ಮಾರ್ಗದಲ್ಲಿ ಬ್ಯಾಗ್‌ ಸಮೇತ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಒಂದರಲ್ಲಿ ಸೆರೆಯಾಗಿದೆ. ಶ್ರದ್ಧಾ ಮೃತದೇಹದ ಭಾಗಗಳನ್ನು ಕಾಡಿಗೆ ಬಿಸಾಕಲು ಆತ ಬ್ಯಾಗ್‌ ಸಮೇತ ಹೋಗುತ್ತಿದ್ದಿರಬಹುದು ಎಂದು ಶಂಕಿಸಿದ್ದಾರೆ.

ಈಗಾಗಲೇ ಈ ಮೇಲಿನ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ, 2020ರಲ್ಲಿ ಶ್ರದ್ಧಾ ಮೇಲೆ ಆರೋಪಿ ಹಲ್ಲೆ ನಡೆಸಿದ್ದ ಸಂದರ್ಭದಲ್ಲಿ ಆಕೆಯ ನೆರವಿಗೆ ಬಂದಿದ್ದ ಇಬ್ಬರು ಸ್ನೇಹಿತರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಗುರುಗ್ರಾಮದಿಂದ ಪ್ರಮುಖ ಪುರಾವೆಗಳಾದ ಮೂರು ಎಲುಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಶ್ರದ್ಧಾಳದ್ದು ಎನ್ನಲಾಗಿದೆ. ಜತೆಗೆ ಮೃತದೇಹವನ್ನು 35 ತುಂಡುಗಳನ್ನಾಗಿಸಲು ಆರೋಪಿ ಬಳಸಿದ್ದಾನೆ ಎನ್ನಲಾದ ಚಾಕು ಮತ್ತು ಇತರೆ ಹರಿತವಾದ ವಸ್ತುಗಳನ್ನು ಅಫ್ತಾಬ್‌ ಪ್ಲಾಟ್‌ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೊತೆಗೆ ಶ್ರದ್ಧಾ ಮತ್ತು ಅಫ್ತಾಬ್‌ನ ಬಟ್ಟೆಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹರಿತವಾದ ವಸ್ತು ಹಾಗೂ ಬಟ್ಟೆಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಿದ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave A Reply

Your email address will not be published.