FIFA World Cup : ಜೊತೆಯಾಗಿ ಫುಟ್ ಬಾಲ್ ಮ್ಯಾಚ್ ನೋಡಲು ಮನೆಯನ್ನೇ ಖರೀದಿ ಮಾಡಿದ ಕ್ರೀಡಾ ಪ್ರೇಮಿಗಳು
ಖತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಜಗತ್ತಿನಾದ್ಯಂತ ಇರುವ ಫುಟ್ಬಾಲ್ ಪ್ರಿಯರ ಹೃದಯದ ಬಡಿತವನ್ನು ಹೆಚ್ಚಿಸುತ್ತಿದೆ. ಫುಟ್ಬಾಲ್ ಅಭಿಮಾನಿಗಳು ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದರಂತೆ ಇದೀಗ ಕೇರಳದ ಪುಟ್ಬಾಲ್ ಪ್ರಿಯರು ಪುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಒಂದು ಹೆಜ್ಜೆ ಮುಂದೆ ಎಂಬಂತೆ ಕೇವಲ ಪುಟ್ಬಾಲ್ ಮ್ಯಾಚ್ ನೋಡಲೆಂದು ಬರೋಬ್ಬರಿ 23 ಲಕ್ಷದ ಆಸ್ತಿಯನ್ನು ಖರೀದಿಸಿದ್ದಾರೆ!
ಹೌದು, ದೇವರನಾಡು ಎಂದೇ ಪ್ರಸಿದ್ಧಿ ಪಡೆದ ಕೇರಳದಲ್ಲಿ ಫಿಫಾ ವಿಶ್ವಕಪ್ ಜ್ವರ ಜೋರಾಗಿದ್ದೂ, ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಕ್ರೀಡಾಪ್ರೇಮಿಗಳು, ಎಲ್ಲರೂ ಜೊತೆಯಾಗಿ ಪಂದ್ಯ ನೋಡುವ ಸಲುವಾಗಿ 23 ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಇರುವ ಒಂದು ಆಸ್ತಿಯನ್ನೇ ಖರೀದಿಸಿದ್ದಾರೆ.
ಇವರು ತಾವು ಖರೀದಿಸಿದ ಜಾಗದಲ್ಲಿದ್ದ ಮನೆ ಸುಂದರ ಹಾಗೂ ಗಮನಾರ್ಹವಾಗಿ ಕಾಣಲು ಬ್ರೆಜಿಲ್, ಅರ್ಜೆಂಟೈನಾ ಹಾಗೂ ಪೋರ್ಚುಗಲ್ ದೇಶಗಳನ್ನು ಚಿತ್ರಿಸಿದ್ದಾರೆ. ಹಾಗೆಯೇ ಜೊತೆಗೆ ಅರ್ಜೆಂಟೈನಾದ ಪುಟ್ಬಾಲ್ ಸ್ಟಾರ್ ಲಿಯೊನಲ್ ಮೆಸ್ಸಿ ಹಾಗೂ ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿನೊ ರೊನಾಲ್ಡ್ ಅವರ ಭಾವಚಿತ್ರವನ್ನು ಕೂಡ ಪೇಂಟ್ ಮಾಡಿದ್ದಾರೆ. ಅಲ್ಲದೇ ಈ ಆಸ್ತಿಯ ಒಳಗೆ ವಿವಿಧ ಫುಟ್ಬಾಲ್ ತಾರೆಯರ ಕಟೌಟ್‌ಗಳನ್ನು ಕೂಡ ನಿರ್ಮಿಸಿದ್ದಾರೆ.
ಈ ಆಸ್ತಿಯ ಖರೀದಿದಾರರಲ್ಲಿ ಒಬ್ಬರಾದ ಶರೀಫ್ ಪಿಎ ಫುಟ್ಬಾಲ್ ವಿಶ್ವಕಪ್ ಬಗ್ಗೆ ತಮ್ಮ ಸಿದ್ಧತೆ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಇವರು, ಫಿಫಾ ವಿಶ್ವಕಪ್‌ಗಾಗಿ ಏನಾದರೂ ಹೊಸತನ್ನು ತರುವ ಯೋಜನೆ ರೂಪಿಸಿದ್ದೆವು. ಇದಕ್ಕಾಗಿ ನಾವು 17 ಜನ ಮಾರಾಟಕ್ಕೆ ಇಟ್ಟಿದ್ದ ಆಸ್ತಿಯೊಂದನ್ನು ಖರೀದಿಸಿದೆವು. ಅಲ್ಲದೇ ಅದನ್ನು ಪುಟ್ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಅವುಗಳ ಧ್ವಜಗಳ ರೀತಿಯಲ್ಲಿ ಅಲಂಕರಿಸಿದೆವು. ಇಲ್ಲಿಗೆ ಆಗಮಿಸಿ ದೊಡ್ಡದಾದ ಸ್ಕ್ರೀನ್ ನಲ್ಲಿ ಫುಟ್ಬಾಲ್ ಮ್ಯಾಚ್ ಅನ್ನು ಎಲ್ಲರೂ ಜೊತೆಯಾಗಿ ನೋಡಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.