ಮಂಗಳೂರು : ಆಟೋ ಸ್ಫೋಟ ಪ್ರಕರಣ : ಆಟೋ ಸ್ಫೋಟಿಸಿದ್ದೂ ನಿಜಕ್ಕೂ ಉಗ್ರರಾ? ಅವರ ಟಾರ್ಗೆಟ್‌ ಯಾರಾಗಿದ್ದರು?

ಬರೀ ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಜನತೆ ಕರಾವಳಿಯಲ್ಲಿ ನಡೆದ ಈ ಒಂದು ಘಟನೆಗೆ ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಮಂಗಳೂರು ನಗರದ ನಾಗುರಿ ಎಂಬಲ್ಲಿ ನಿನ್ನೆ ಸಂಜೆ 4.30ರ ಸುಮಾರಿಗೆ ಆಟೋ ರಿಕ್ಷಾವೊಂದು ದಿಢೀರನೇ ಸ್ಫೋಟಗೊಂಡಿತ್ತು. ನಾಗುರಿಯಿಂದ ಪಂಪ್ ವೆಲ್ ಕಡೆಗೆ ಆಟೋರಿಕ್ಷಾವೊಂದು ಸಂಚರಿಸುತ್ತಿದ್ದಾಗ, ನಾಗುರಿಯಲ್ಲಿ ಪ್ರಯಾಣಿಕನೊಬ್ಬನು ಆಟೋ ರಿಕ್ಷಾ ಹತ್ತಿದ್ದ. ಆತನ ಕೈಯಲ್ಲೊಂದು ಪ್ಲಾಸ್ಟಿಕ್ ಬ್ಯಾಗ್ ಇದ್ದು, ಅದರೊಳಗೆ ಕುಕ್ಕರ್ ಇತ್ತು. ಆದರೆ ದಾರಿ ಮಧ್ಯೆ ಅಲ್ಲಿದ್ದ ಕುಕ್ಕರ್‌ನಲ್ಲಿ ಸ್ಫೋಟಗೊಂಡು ಭಾರೀ ಸದ್ದು ಕೇಳಿಸಿದೆ.

 

ಘಟನೆಯಲ್ಲಿ ಪ್ರಯಾಣಿಕ ಹಾಗೂ ಆಟೋ ಚಾಲಕನಿಗೆ ಬೆಂಕಿ ತಗುಲಿದ್ದು, ಆಟೋದ ಒಳಭಾಗವು ಸುಟ್ಟು ಕರಕಲಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮೊದಲು ಆಕಸ್ಮಿಕ ಘಟನೆ ಎಂದು ಹೇಳಿದ್ದ ಪೊಲೀಸರಿಗೆ ಸಣ್ಣ ಸುಳಿವೊಂದು ಸಿಕ್ಕಿದ್ದೂ, ಕೆಲವು ತನಿಖೆಗಳ ನಂತರ ಇದು ಉಗ್ರರ ಕೈವಾಡವೇ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಭಾರಿ ಸಂಚು ರೂಪಿಸಿ, ಈ ದಿಢೀರ್ ಸ್ಫೋಟದ ಹಿಂದೆ ಉಗ್ರರ ಕೈವಾಡವಿದೆಯಾ? ಇದ್ದರೂ ಇವರ ಉದ್ದೇಶವೇನಿರಬಹುದು? ರಾಜ್ಯದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿದ್ದರಾ? ಇದರಲ್ಲಿ ಶಾಮೀಲಾಗಿರೊದು ಯಾರ್ಯಾರು? ಎಷ್ಟು ಜನ? ಈ ಎಲ್ಲಾ ಆಯಾಮಗಳಲ್ಲಿ ಇದೀಗ ತನಿಖೆ ನಡೆಯುತ್ತಿದೆ.

KA 19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿದ್ದೂ, ಸ್ಫೋಟಗೊಂಡ ಆಟೋದಲ್ಲಿ ನಟ್ ಬೋಲ್ಟ್​​ಗಳು ಮತ್ತು ಬ್ಯಾಟರಿ ಪತ್ತೆ ಆಗಿದೆ. ಅಲ್ಲದೇ ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಕಂಡು ಬಂದಿದ್ದೂ, ಲಘು ತೀವ್ರತೆ ಇರುವ ಸ್ಫೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಇದೊಂದು ಟೈಮ್ ಬಾಂಬ್ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಟೈಮರ್ ಸೆಟ್ ಮಾಡಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದಾರೆ, ಆದರೆ ಯಾವುದೋ ದೋಷದಿಂದ ಮಾರ್ಗಮಧ್ಯೆಯೇ ಬಾಂಬ್ ಸ್ಫೋಟಗೊಂಡಿರಬಹುದು ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಇದು ಆಕಸ್ಮಿಕವಾಗಿ ಸಂಭವಿಸಿದ ಸ್ಫೋಟವಾಗಿ ಕಂಡುಬಂದಿದ್ದೂ, ಇದೊಂದು ವ್ಯವಸ್ಥಿತ ಕೃತ್ಯ ಎಂಬ ಮಾಹಿತಿ ಕಲೆ ಹಾಕಿದ್ದಾರೆ.

ಇದೀಗ ದಾರಿ ಮಧ್ಯೆ ಆಟೋದಲ್ಲಿ ಹತ್ತಿಕೊಂಡಿದ್ದ ಪ್ರಯಾಣಿಕನ ಮೇಲೆ ಭಾರೀ ಅನುಮಾನ ಮೂಡಿದ್ದೂ, ಈತನ ಆಧಾರ್ ಕಾರ್ಡ್‌ನಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ಹೆಸರಿನ ವಿಳಾಸವಿರುವುದು ಪತ್ತೆಯಾಗಿದೆ. ಇನ್ನು ಆತನ ಹೇಳಿಕೆ ಆಧರಿಸಿ ಮೈಸೂರಿನಲ್ಲಿ ಪೊಲೀಸರ ತಂಡವು ತನಿಖೆ ನಡೆಸುತ್ತಿದೆ. ತನ್ನ ಹೆಸರು ಪ್ರೇಮ್ ರಾಜ್ ಎಂದು ಬಾಬುರಾವ್
ತನ್ನ ಅಣ್ಣ ಎಂದು ತಿಳಿಸಿ ಅವರ ನಂಬರ್ ನೀಡಿದ್ದಾನೆ. ಆದರೆ ಆ ನಂಬರ್‌ಗೆ ಕರೆ ಮಾಡಿದಾಗ ಪ್ರೇಮ್ ರಾಜ್ ತನ್ನ ಸಂಬಂಧಿಯೇ ಅಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗೂ ಆತ ತನ್ನ ರೂಂನಲ್ಲಿದ್ದ, ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದ. ಆತನ ಬಗ್ಗೆ ಬೇರೆ ಏನೂ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಆಧಾರ್ ಕಾರ್ಡ್​ ನಲ್ಲಿರುವ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಅಸಲಿ ಆದರೆ ಫೋಟೋ ಮಾತ್ರ ನಕಲಿ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದೂ, ಆಧಾರ್ ಕಾರ್ಡ್​​ನಲ್ಲಿರುವ ಅಸಲಿ ಪ್ರೇಮ್​ರಾಜ್​ ಹುಬ್ಬಳ್ಳಿಯವರಾಗಿದ್ದೂ, ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ ಹಾಗೂ ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೇಮ್​ರಾಜ್​ ಪೋಷಕರು ಕಳೆದ 25 ವರ್ಷಗಳಿಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಕಳೆದ 2 ವರ್ಷಗಳಲ್ಲಿ 2 ಬಾರಿ ಆಧಾರ್ ಕಳೆದುಕೊಂಡಿರುವ ಇವರು, ಮೊದಲ ಸಲ ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರ್ಡ್ ಕಳೆದುಕೊಂಡಿದ್ದು, ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದರು. ಅದನ್ನು ಕಳೆದ 6 ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುತ್ತಿದ್ದ ವೇಳೆ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಎಲ್ಲಾ ಮಾಹಿತಿ ಸಂಬಂಧಿಸಿದಂತೆ, ಗಾಯಗೊಂಡಿರುವ ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ ಎಂದು ಗೊತ್ತಾಗಿದೆ.

ಶಂಕಿತ ವ್ಯಕ್ತಿಯು ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಮೋಹನ್ ಕುಮಾರ್ ಎಂಬುವರ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದನು. ಬಾಡಿಗೆ ಪಡೆಯಲು ಮಾಡಿಕೊಂಡಿದ್ದ ಕರಾರು ಪತ್ರದಲ್ಲಿ ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ನಮೂದಿಸಿದ್ದ. ತನ್ನ ಮೂಲ ಊರು ಮತ್ತು ವಿಳಾಸವಾಗಿ ಹುಬ್ಬಳ್ಳಿಯ ಪ್ರದೇಶವೊಂದನ್ನು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆತನ ಕೊಠಡಿಯನ್ನು ಪ್ರವೇಶಿಸಿದಾಗ ಅಲ್ಲಿ ಸ್ಫೋಟಕ್ಕೆ ಬಳಸುವ ಸರ್ಕೀಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ಮರದಹೊಟ್ಟು, ಅಲ್ಯುಮಿನಿಯಂ, ಮಲ್ಟಿಮೀಟರ್, ವೈರ್​ಗಳು, ಮಿಕ್ಸರ್ ಜಾರ್​ಗಳು, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಪೋಟಕಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇದೊಂದು ಉಗ್ರ ಕೃತ್ಯ ಎನ್ನುವುದು ಖಚಿತವಾದ್ದರಿಂದ ಘಟನೆಯ ತನಿಖೆ ಹೊಣೆಯನ್ನು ಎನ್ಐಎಗೆ ನೀಡಲಾಗಿದೆ. ಈಗಾಗಲೇ ಎನ್ಐಎ ಟೀಂ ಮೈಸೂರಿಗೆ ಆಗಮಿಸಿದ್ದೂ, ಶಂಕಿತ ವ್ಯಕ್ತಿಯ ಮನೆಗೆ NIA ತಂಡ ಭೇಟಿಕೊಟ್ಟಿದೆ.

Leave A Reply

Your email address will not be published.