ಬಂಟ್ವಾಳ: ಕೊರಗಜ್ಜನ ಪವಾಡ ಸಾಬೀತು | ಅಗೇಲು ಸೇವೆ ಕೊಟ್ಟ ‘ಉಕ್ರೇನ್ ಕುಟುಂಬ’
ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕಾರ್ಣಿಕ ಈಗ ಮತ್ತೊಮ್ಮೆ ಬಯಲಾಗಿದೆ. ಹೌದು, ಅದು ಕೂಡಾ ದೂರದ ಉಕ್ರೇನ್ ನ ಕುಟುಂಬವೊಂದು ಅಗೇಲು ಸೇವೆ ನೀಡಿದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಉಕ್ರೇನ್ ನ ಕುಟುಂಬವೊಂದು ಈ ಕಾರ್ಯ ಮಾಡಿದೆ. ಅಷ್ಟಕ್ಕೂ ಈ ಉಕ್ರೇನ್ ಕುಟುಂಬ ಯಾಕೆ ಈ ಸೇವೆ ಕೈಗೊಂಡಿತು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ತಮ್ಮ ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನ ಕೋಲದಲ್ಲಿ ಈ ಕುಟುಂಬ ಹರಕೆ ಹೇಳಿತ್ತು. ಹಾಗಾಗಿ ಸಮಸ್ಯೆ ಪರಿಹಾರವಾದ ಹಿನ್ನಲೆಯಲ್ಲಿ ತಾವು ಹೇಳಿದ್ದ ಹರಕೆಯನ್ನು ತೀರಿಸಲು ಈ ಸೇವೆ ಕೊಟ್ಟಿದೆ. ಇದೀಗ ಕುಟುಂಬ ಸಂತೃಪ್ತ ಮನೋಭಾವದೊಂದಿಗೆ ಉಕ್ರೇನ್ ಗೆ ಹೊರಡಿದೆ.
ಉಕ್ರೇನ್ ನಿಂದ ಭಾರತ ಪ್ರವಾಸಕ್ಕೆಂದು ಕಳೆದ ಕೆಲವು ತಿಂಗಳ ಹಿಂದೆ ಬಂದಿದ್ದ ಉಕ್ರೇನ್ ಪ್ರಜೆಗಳಾದ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಗುರೂಜಿಯವರಲ್ಲಿ ತಿಳಿಸಿದ್ದು, ಅದರಂತೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯ ಇದ್ದರು.
ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದಾರೆ. ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಕೊರಗಜ್ಜನ ಆಶೀರ್ವಾದದಿಂದ ಮ್ಯಾಕ್ಸಿಂ ಗುಣಮುಖನಾಗಿದ್ದು, ಅಜ್ಜನ ಪವಾಡಕ್ಕೆ ಋಣಿಯಾಗಿ ಈ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಈ ಕುಟುಂಬ ಇನ್ನೆರಡು ದಿನದಲ್ಲಿ ಟರ್ಕಿಗೆ ಪ್ರಯಣಿಸಿ, ಬಳಿಕ ತಮ್ಮ ತವರು ಉಕ್ರೇನ್ ಗೆ ಪಯಣ ಬೆಳೆಸಲಿದ್ದಾರೆ.