‘ದಿ ವ್ಯಾಕ್ಸಿನ್ ವಾರ್’ ಎನ್ನಲು ಬರುತ್ತಿದ್ದಾರೆ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ!
ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಆಗಿದೆ. ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದ್ದು, ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಈ ಚಿತ್ರ 2023ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೂಲಕ ವಿವೇಕ್ ಅಗ್ನಿಹೋತ್ರಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಕಡಿಮೆ ಬಜೆಟ್ನಲ್ಲಿ ತಯಾರಾಗಿದ್ದ ಈ ಸಿನಿಮಾ ನೂರಾರು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು. ಇದರಿಂದ ಸಣ್ಣ ಬಜೆಟ್ ಚಿತ್ರಗಳು ದೊಡ್ಡ ಮೊತ್ತದ ಕಲೆಕ್ಷನ್ ಮಾಡಲು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯನ್ನು, ಮಾತುಗಳನ್ನು ಈ ಚಿತ್ರವು ಹುಸಿಗೊಳಿಸಿತ್ತು.
‘ದಿ ಕಾಶ್ಮೀರ್ ಫೈಲ್ಸ್’ ಸೂಪರ್ ಹಿಟ್ ಆದ ನಂತರ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಇದೀಗ ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾವನ್ನು ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 11ರಂದು ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆಗಿದ್ದು, ಈ ಚಿತ್ರ ಸೂಪರ್ ಹಿಟ್ ಕೂಡ ಆಗಿದೆ. ಆರಂಭದ ವಾರಗಳಲ್ಲಿ ಸಾಧಾರಣ ಗಳಿಕೆ ಮಾಡಿದ್ದ ಈ ಚಿತ್ರ ಮುಂದಿನ ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ 90ರ ದಶಕದ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆಯ ಆಧಾರದ ಮೇಲೆ ಸಿದ್ಧಗೊಂಡಿತ್ತು. ಇನ್ನೂ, ಈ ಚಿತ್ರಕ್ಕೆ ರಾಜಕಾರಣಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ವಿವೇಕ್ ಅವರು ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ರಿವೀಲ್ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ವ್ಯಾಕ್ಸಿನ್ ಬಾಟಲಿ ಮೇಲೆ ಚಿತ್ರದ ಟೈಟಲ್ ಬರೆಯಲಾಗಿದೆ. ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ಗಾಗಿ ಎಲ್ಲಾ ಕಡೆ ಹಾಹಾಕಾರ ಉಂಟಾಗಿತ್ತು. ಈ ವಿಷಯವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆಯೇ ಎಂಬುದು ತಿಳಿಯಬೇಕಿದೆ.
ಇನ್ನೂ, ಈ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಈ ಚಿತ್ರ 2023ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ವಿಶೇಷ ಏನಂದ್ರೆ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ಮರಾಠಿ ಮೊದಲಾದ ಭಾಷೆಗಳು ಸೇರಿದಂತೆ ಒಟ್ಟಾರೆ 11 ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲು ಸಿದ್ಧಗೊಳ್ಳುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ಮಾಪಕರಾದ ಪಲ್ಲವಿ ಜೋಶಿ ಹಾಗೂ ಅಭಿಷೇಕ್ ಅಗರ್ವಾಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ, ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.