ಹಿಜಾಬ್ ಪರ ಹೋರಾಟದ ಬೆನ್ನಲ್ಲೇ ಗಡಿನಾಡಿನಲ್ಲಿ ಹಿಜಾಬ್ ಗೆ ಬೆಂಕಿ!? ಮುಸ್ಲಿಂ ಮಹಿಳೆಯರಿಂದಲೇ ನಡೆಯಿತು ಉಗ್ರ ಪ್ರತಿಭಟನೆ!?
ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ವಿಚಾರದಲ್ಲಿ ನಡೆದಿದ್ದ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಿಜಾಬ್ ಬೇಕು ಎಂದು ಮುಸ್ಲಿಂ ಸಮುದಾಯ ಪಟ್ಟು ಹಿಡಿಯುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರು ಸೇರಿಕೊಂಡು ಹಿಜಾಬ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ದೇಶದಲ್ಲೇ ಮೊದಲ ಘಟನೆಯೊಂದು ಕೇರಳದಿಂದ ವರದಿಯಾಗಿದೆ.
ಕೇರಳದ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ಘಟನೆ ನಡೆದಿದ್ದು, ಈ ಮೂಲಕ ಇರಾನ್ ನಲ್ಲಿ ನಡೆಯುತ್ತಿರುವ ಹಿಜಾಬ್ ಪ್ರತಿಭಟನೆಗೆ ಭಾರತದಲ್ಲೂ ಬೆಂಬಲ ವ್ಯಕ್ತವಾಗಿದೆ.
ಕೇರಳದ ಕೋಜಿಕ್ಕೋಡ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹೋರಾಟಕ್ಕೆ ಇಳಿದಿದ್ದ ಮುಸ್ಲಿಂ ಮಹಿಳೆಯರು, ಸಂಘಟನೆಯ ಪ್ರಮುಖರ ಸಮ್ಮುಖದಲ್ಲೇ ಹಿಜಾಬ್ ಸುಟ್ಟುಹಾಕಿದ್ದಾರೆ. ಸಂಘಟನೆಯ ಆರು ಮಹಿಳೆಯರು ಹಿಜಾಬ್ ಸುಡುವ ನೇತೃತ್ವ ವಹಿಸಿದ್ದರು. ಯುಕ್ತಿವಾದಿ ಸಂಗಮ ರಾಷ್ಟೀಯ ಮಟ್ಟದ ಸಂಸ್ಥೆಯಾಗಿದ್ದು, ಪ್ರತೀವರ್ಷದಂತೆ ಈ ವರ್ಷವೂ ನಡೆದ ವಿಚಾರ ಸಂಕಿರಣದಲ್ಲಿ ಈ ರೀತಿಯ ಪ್ರತಿಭಟನೆ ನಡೆಸಲಾಯಿತು.
ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹಿಜಾಬ್ ಗಾಗಿ ಪಟ್ಟು ಹಿಡಿದಿರುವ ಸಮುದಾಯಗಳ ಮಧ್ಯೆ ಹಿಜಾಬ್ ವಿರೋಧಿಸಿದ ಮಹಿಳೆಯರ ನಡೆಗೆ ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶಗಳು ವ್ಯಕ್ತವಾಗುತ್ತಿದ್ದೂ, ಸಾಲು ಸಾಲು ಕಾಮೆಂಟ್ ಗಳು ಹರಿದಾಡುತ್ತಿದೆ.