ದಿಢೀರ್ ಬೇಡಿಕೆ ಕಳೆದುಕೊಂಡ ತೆಂಗು ಕೊಬ್ಬರಿ – ರೈತರ ಮುಖದಲ್ಲಿ ನಿರಾಸೆ!!!

ಮಲೆನಾಡ ಭಾಗದಲ್ಲಿ ಅಡಕೆ ಜತೆಗೆ ಉಪಬೆಳೆಯನ್ನಾಗಿ ತೆಂಗನ್ನು ಬೆಳೆಯುತ್ತಾರೆ. ಆದರೆ ಇದೀಗಾ ಬಹು ಆದಾಯದ ಬೆಳೆಯಾದ ತೆಂಗುವಿನ ಬೆಲೆಯಲ್ಲಿ ದಿಢೀರ್‌ ಕುಸಿತ ಕಂಡು ಬೆಳೆಗಾರರಿಗೆ ತಲೆಬಿಸಿಯಾಗಿದೆ. ಕಳೆದ 2 ತಿಂಗಳಿನಿಂದೀಚೆಗೆ 1 ಸಿಪ್ಪೆ ತೆಂಗಿನ ಕಾಯಿ ಕೇವಲ ಆರೇಳು ರೂಪಾಯಿಗೆ ಮಾರಾಟ ಮಾಡುವಂತಹ ಅನಿವಾರ್ಯತೆ ರೈತರಿಗೆ ಎದುರಾಗಿದ್ದೂ ಸಂಕಷ್ಟ ತಂದಿದೆ.

 

ನವೆಂಬರ್‌ ತಿಂಗಳಿನಲ್ಲೂ ಮಳೆ ಸುರಿಯುತ್ತಿರುವ ಕಾರಣ ಸಿಪ್ಪೆ ತೆಂಗಿನಕಾಯಿಯಲ್ಲಿ ಸುಳಿ ಬೆಳೆಯುತ್ತಿದ್ದು ರೈತರನ್ನು ಭಾರಿ ಸಂಕಷ್ಟಕ್ಕೆ ತಳ್ಳಿದೆ. ಕಾಂಡಕೊರಕ, ಕೊಳೆರೋಗ, ಸುಳಿಬಾಧೆ, ನುಸಿರೋಗ ಸೇರಿದಂತೆ ಅನೇಕ ರೀತಿಯ ಕಾಯಿಲೆಗಳು ತೆಂಗಿನ ಸಸಿ ಮತ್ತು ಮರದಲ್ಲಿ ಕಾಣಿಸುತ್ತಿದ್ದವು. ಇದರಿಂದ ಕಂಗಾಲಾದ ರೈತರು ತೆಂಗು ಬೆಳೆಯತ್ತ ಆಸಕ್ತಿ ಕಳೆದುಕೊಂಡಿದ್ದಾರೆ. ಆದರೆ ಕೆಲ ವರ್ಷದ ಹಿಂದೆ ಬೆಲೆಯಲ್ಲಿ ಏರಳಿತ ಹಾಗೂ ಹೆಚ್ಚೂಕಡಿಮೆ ಸ್ಥಿರತೆ ಇದ್ದ ಕಾರಣ ರೈತರು ಪುನಃ ತೆಂಗು ಬೆಳೆಯತ್ತ ಆಕರ್ಷಿತರಾಗಿದ್ದರು.

ಮಲೆನಾಡು ಭಾಗದಲ್ಲಿ ಸಿಪ್ಪೆ ಸುಲಿದ 1 ತೆಂಗಿನ ಕಾಯಿಗೆ ಕೆ.ಜಿ. ಲೆಕ್ಕದಲ್ಲಿ 20 ರಿಂದ 25 ರೂ. ವರೆಗೂ ಮಾರಾಟವಾಗುತ್ತಿದೆ. ಆದರೆ, ರೈತರ ಕೈಯಿಂದ ಸಿಪ್ಪೆ ತೆಂಗಿನ ಕಾಯಿ ಕೇವಲ ಆರೇಳು ರೂಪಾಯಿಗೆ ಮಾರಾಟವಾಗುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ.

ತೆಂಗಿನ ಕಾಯಿಯನ್ನು ಧಾರ್ಮಿಕ ಕಾರ‍್ಯಕ್ರಮ, ವಿವಾಹ ಸಮಾರಂಭ, ಹೋಟೆಲ್‌, ದಿನ ಬಳಕೆಗೆ ಹೆಚ್ಚಾಗಿ ಬಳಸಲಾಗುತ್ತಿದ್ದರೂ. ಬೆಲೆಯಲ್ಲಿ ಯಾವುದೇ ಏರಳಿತ ಕಾಣುತ್ತಿಲ್ಲ. ಸಿಪ್ಪೆ ತೆಂಗಿನಕಾಯಿಗೆ ದಿಢೀರನೆ ಬೆಲೆ ಕುಸಿತ ರೈತರಿಗೆ ನಂಬಲು ಸಾಧ್ಯ ವಾಗುತ್ತಿಲ್ಲ.

ನಷ್ಟದ ನಡುವೆಯೂ ಕೆಲ ರೈತರು ತೆಂಗು ಬೆಳೆಯನ್ನು ಆಶ್ರಯಿಸಿದ್ದಾರೆ. ತೆಂಗಿನಕಾಯಿ ಜೊತೆಗೆ ಇದೀಗ ಮಾರುಕಟ್ಟೆಯಲ್ಲಿ 30 ರೂ.ಗೂ ಹೆಚ್ಚು ದರಕ್ಕೆ ಮಾರಾಟವಾಗುತ್ತಿರುವ ಎಳುನೀರು, ರೈತರಿಗೆ 1 ಎಳುನೀರಿಗೆ 15 ರೂ. ಮಾತ್ರ ದೊರೆಯುತ್ತಿದೆ.

ತೆಂಗಿನ ಬೇಡಿಕೆಯ ಜೊತೆಗೆ ಕೊಬ್ಬರಿಯ ಬೇಡಿಕೆಯೂ ಇಳಿಕೆ ಕಂಡುಬಂದಿದೆ. ದೀಪಾವಳಿ ವೇಳೆ ಚುರುಕಾಗಬೇಕಿದ್ದ ಕೊಬ್ಬರಿ ವಹಿವಾಟು ಮಂದಗತಿಯಲ್ಲಿ ಸಾಗುತ್ತಿದೆ. 2022ರ ಆರಂಭದಲ್ಲಿ ಕ್ವಿಂಟಾಲ್‌ಗೆ 18 ಸಾವಿರ ರೂ. ಗಡಿ ದಾಟಿದ್ದ ಕೊಬ್ಬರಿ ಬೆಲೆ ಈಗ 12 ಸಾವಿರ ರೂ. ಅಂಚಿಗೆ ಕುಸಿದಿದೆ. ಮಾರುಕಟ್ಟೆಯಲ್ಲಿಕೊಬ್ಬರಿಗೆ ಬೇಡಿಕೆ ಕುಸಿತವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ರೈತರ ಹಿತ ಕಾಯುವ ಸಹಕಾರ ಸಂಸ್ಥೆಗಳು, ಪ್ರಾತಿನಿಧಿಕ ಸಂಸ್ಥೆ ಎಪಿಎಂಸಿ, ಬೆಲೆಕುಸಿತದ ವಿರುದ್ಧ ಧ್ವನಿ ಎತ್ತಿಲ್ಲ. ಅಲ್ಲದೇ ಸರಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಬೆಂಬಲ ಬೆಲೆ ನೀಡುವ ಕುರಿತಾಗಿ ಚಿಂತಿಸಿಲ್ಲ. ಬೆಲೆ ಕುಸಿತದಿಂದ ತೆಂಗು ಬೆಳೆ ರೈತರಿಗೆ ಆಗಿರುವ ನಷ್ಟದ ಕುರಿತು ಜಿಲ್ಲಾ, ತಾಲೂಕು ಆಡಳಿತ ಇನ್ನೂ ಸರಕಾರಕ್ಕೆ ವರದಿ ಸಲ್ಲಿಸಿಲ್ಲ.

ಮಳೆಯ ಕಾರಣ ಹಿಡಿದುಕೊಂಡು ದಾಸ್ತಾನಿರುವ ಕೊಬ್ಬರಿಯ ಗುಣಮಟ್ಟ ಸರಿಯಿಲ್ಲ ಎಂಬ ನೆಪ ಹೇಳಿ ವರ್ತಕರು ಬೇಕಾಬಿಟ್ಟಿ ದರ ಹೇಳುತ್ತಿದ್ದಾರೆ. ಮನೆ ಸುತ್ತ ತೆಂಗಿನಕಾಯಿ ರಾಶಿ ಹಾಕಿರುವ ರೈತರು ಬೆಲೆ ಏರಿಕೆ ನಿರೀಕ್ಷೆಯಲ್ಲಿ ಕಾಲ ತಳ್ಳುವಂತ ಕೆಟ್ಟ ಪರಿಸ್ಥಿತಿ ಎದುರಾಗಿದೆ. ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಸರಕಾರವನ್ನು ಒತ್ತಾಯಿಸಲು ತೆಂಗು ಬೆಳೆಗಾರ ಮತ್ತೆ ಬೀದಿಗಿಳಿದು ಪ್ರತಿಭಟಿಸುವ ಅನಿವಾರ್ಯತೆ ಎದುರಾಗಿದೆ.

Leave A Reply

Your email address will not be published.