ಟಗರು ಕೊಟ್ಟ ಡಿಚ್ಚಿಗೆ ತಲೆ ತಿರುಗಿ ಶೆಡ್ಡಿನಲ್ಲಿ ಬಂಧಿಯಾದ ಚಿರತೆ | ಅದೃಷ್ಟ ಹಿಡ್ಕೊಂಡು ಗುಮ್ಮಿದ್ರೆ ಹಿಂಗೂ ಆಗುತ್ತೆ !!!
ಚಿರತೆ ಬಲಶಾಲಿಯಾಗಿದ್ದು, ಕಾಡಿನಲ್ಲಿ ರಾಜಾರೋಷವಾಗಿ ಓಡಾಡುವ ಪ್ರಾಣಿ. ಆದರೆ ಚಿರತೆ ಒಂದು ಟಗರಿಗೆ ಹೆದರಿದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲಕ್ಕೆ ಕಾರಣವಾಗಿದೆ. ಅದೃಷ್ಟ ಕೈ ಕೊಟ್ಟರೆ ಖುದಾ ಕ್ಯಾ ಕರೆಗಾ ಎಂಬ ಮಾತಿನಂತೆ ಚಿರತೆ ಬೇಸ್ತು ಬಿದ್ದಿದೆ. ಒಂದು ಕುರಿಮರಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಬಂದ ಚಿರತೆಯು ಕಣ್ಮುಂದೆ ಹತ್ತಾರು ಆಡು ಕುರಿಗಳು ಅದೇ ರೂಮಿನಲ್ಲಿ ಇದ್ದರೂ ಯಾವುದನ್ನು ತಿನ್ನಲಾಗದ ಸ್ಥಿತಿಯಲ್ಲಿ, ಬಲಿಷ್ಠವಾದ ಟಗರಿನ ಏಟಿಗೆ ಭಯಭೀತಗೊಂಡು ಕೊಟ್ಟಿಗೆಯಲ್ಲಿ ಬಂಧಿಯಾಗಿದೆ. ಇನ್ನೂ ಚಿರತೆಯನ್ನು ಸುಸ್ತು ಬೀಳಿಸಿರುವ ಆ ಟಗರಿನ ಧೈರ್ಯ ಮೆಚ್ಚಲೇಬೇಕು. ಹಾಗಾದರೆ ಚಿರತೆಯ ಪರಿಸ್ಥಿತಿ ಹೇಗಿದೆ ಅಂತಾ ನೋಡ್ಲೇ ಬೇಕು ಅಲ್ವಾ? ನೋಡೋಣ.
ಮಂಡ್ಯದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆ ಆತಂಕ ಸೃಷ್ಟಿಸುತ್ತಿದೆ. ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುಂದನಗುಪ್ಪೆ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ಹಲವಾರು ದಿನಗಳಿಂದ ಚಿರತೆಯೊಂದು ಕಾಣಿಸಿಕೊಂಡಿದೆ. ಇದು ಜಾನುವಾರುಗಳ ಮೇಲೆ ದಾಳಿ ನಡೆಸಿ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಅಲ್ಲಿನ ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದ್ದರು. ಚಿರತೆಯನ್ನು ಆದಷ್ಟು ಬೇಗ ಸೆರೆಹಿಡಿಯಿರಿ ಇಲ್ಲವಾದರೆ ಅದು ಕುರಿ, ಮೇಕೆಗಳ ಜೊತೆಗೆ ನಮ್ಮನ್ನು ತಿಂದು ಹಾಕಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.
ಆದರೆ ಇಂದು ಬೆಳಗಿನ ಜಾವ 3 ಗಂಟೆಗೆ ಕುಂದನಗುಪ್ಪೆ ಗ್ರಾಮಕ್ಕೆ ಕಾಲಿಟ್ಟ ಚಿರತೆಯು ಕಷ್ಣಪ್ಪ ಎಂಬವರ ಕೊಟ್ಟಿಗೆಗೆ ನುಗ್ಗಿದೆ. ಕೊಟ್ಟಿಗೆಯಲ್ಲಿ 15 ಕ್ಕೂ ಹೆಚ್ಚು ಕುರಿ-ಮೇಕೆಗಳು, ದನ-ಕರುಗಳು ಹಾಗೂ ಕೋಳಿಯೂ ಇದ್ದವು. ಆದರೆ ಚಿರತೆಯ ದುರಾದೃಷ್ಟಕ್ಕೆ ಬೇಟೆಗೆ ನುಗ್ಗಿದ ತಕ್ಷಣವೇ ಬಲಿಷ್ಠವಾದ ಟಗರೊಂದು ಗುದ್ದಿದೆ. ಟಗರಿನ ಬಲವಾದ ಒಡೆತಕ್ಕೆ ಚಿರತೆ ತತ್ತರಿಸಿ ಹೋಗಿದೆ. ಅಷ್ಟರಲ್ಲಿ ಕುರಿ-ಮೇಕೆಗಳ ಚೀರಾಟ ಕೇಳಿ ಹೊರಬಂದ ಮನೆಯವರು ಕೊಟ್ಟಿಗೆಯಲ್ಲಿ ಚಿರತೆಮನ್ನು ಕಂಡು ದಂಗಾಗಿದ್ದಲ್ಲದೆ, ಭಯಭೀತರಾಗಿದ್ದಾರೆ. ಚಿರತೆ ಕೊಟ್ಟಿಗೆಗೆ ನುಗ್ಗಿ ಅದರ ಸುತ್ತ ಹಾಕಿದ್ದ ಕಬ್ಬಿಣದ ಗೂಡಿನಿಂದ ಹೊರಬರಲಾಗದೆ ಅಲ್ಲೇ ಕೆಲವು ಗಂಟೆ ಪರದಾಡಿದೆ.
ತದನಂತರ ಗ್ರಾಮಸ್ಥರು ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಡಿಎಫ್‌ಓ ವೃತ್ತಾರನ್ ಹಾಗೂ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯಲು ಯೋಜನೆ ರೂಪಿಸಿದ್ದಾರೆ. ಯೋಜನೆಯಂತೆ ಚಿರತೆ ಜನರನ್ನು ನೋಡಿ ಗಾಬರಿ ಬೀಳದಂತೆ ಕೊಟ್ಟಿಗೆಯನ್ನು ಟಾರ್ಪಾಲಿನ್ ನಲ್ಲಿ ಮುಚ್ಚಿಲಾಗಿದೆ. ನಂತರ ಮೈಸೂರಿನಿಂದ ಅರವಳಿಕೆ ತಜ್ಞರನ್ನು ಕರೆಸಿ, ಚಿರತೆಗೆ ಅರವಳಿಕೆ ಮದ್ದು ನೀಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಟಗರಿನ ಸಹಾಯದಿಂದಾಗಿ ಕುಂದನಗುಪ್ಪೆಗೆ ಪ್ರವೇಶ ಮಾಡಿದ್ದ ಚಿರತೆಯನ್ನೇನೋ ಹಿಡಿದಾಯಿತು. ಹಾಗೇ ಗ್ರಾಮಸ್ಥರು ನಿರಾಳತೆಯ ನಿಟ್ಟುಸಿರಿಟ್ಟರು. ಆದರೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಚಿರತೆಯ ಆತಂಕ ಮುಂದುವರಿದಿದೆ. ಕಳೆದ ಹದಿನೈದು ದಿನಗಳಿಂದ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಅಕ್ಟೋಬರ್ 22 ರಂದು ಕೆಆರ್‌ಡ್ಯಾಂ ಪಕ್ಕದಲ್ಲಿಯೇ ಚಿರತೆ ಸಿಬ್ಬಂದಿಯೊಬ್ಬರಿಗೆ ಕಾಣಿಸಿಕೊಂಡಿತ್ತು. ಅಂದು ಚಿರತೆಗೆ ಬಲೆ ಬೀಸಿ, ಕಾರ್ಯಾಚರಣೆ ನಡೆಸಿ ಚಿರತೆ ಸಿಗದೆ ಸುಮ್ಮನಾಗಿದ್ದರು. ಆದರೆ ಮತ್ತೆ ಬೃಂದಾವನದ ಉತ್ತರ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾಗಿ, ಸಿಸಿಟಿವಿಯಲ್ಲಿ ಅದರ ಚಲನವಲನ ಸೆರೆಯಾಗಿತ್ತು.
ಅಂದಿನಿಂದ ಇಂದಿನವರೆಗೂ ಉತ್ತರ ಬೃಂದಾವನ ಬಂದ್ ಮಾಡಲಾಗಿತ್ತು. ಹಾಗೂ ಬೋನ್ ಇಟ್ಟು ಜವಾಬ್ದಾರಿಯಿಂದ ಸುಮ್ಮನಾಗಿದ್ದರು. ಆದರೆ ಇದು ಪ್ರವಾಸಿಗರ ಬೇಸರ ತಂದೊಡ್ಡಿದೆ. ಯಾಕೆಂದರೆ ಬೃಂದಾವನದ ಪ್ರಮುಖ ಆಕರ್ಷಣೆ ಅಂದ್ರೆ ಅದು ಉತ್ತರ ಬೃಂದಾವನದಲ್ಲಿರುವ ನೃತ್ಯ ಕಾರಂಜಿ. ಆ ಸೌಂದರ್ಯ ಸವಿಯಬೇಕೆಂದು ರಾಜ್ಯವಲ್ಲದೆ ಹೊರರಾಜ್ಯದಿಂದಲು ಬಹಳಷ್ಟು ಜನ ಬರುತ್ತಿರುತ್ತಾರೆ. ಆದರೆ ಉತ್ತರ ಬೃಂದಾವನ ಬಂದ್ ಆಗಿರುವುದು ಬೇಸರ ಉಂಟು ಮಾಡಿದೆ ಎಂದು ಪ್ರವಾಸಿಗರು ಹೇಳಿದ್ದಾರೆ. ಅಲ್ಲದೆ ಟಿಕೆಟ್ ದರವನ್ನು ಕಡಿಮೆ ಮಾಡದೇ, ಚಿರತೆ ಸೆರೆಹಿಡಿಯದೆ ನಿರ್ಲಕ್ಷ ಮಾಡುತ್ತಿರುವ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.