Mangalore Tourism : ಮಂಗಳೂರಿನ ಕೆಲವೊಂದು ಪ್ರವಾಸಿ ತಾಣಗಳ ಕಿರು ಪರಿಚಯ ಇಲ್ಲಿದೆ!!!

ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದಾಗಿದ್ದು, ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಭಾಷೆ, ಆಚಾರ, ವಿಚಾರಗಳು, ಕಲೆಗಳಿಂದ ತನ್ನದೇ ಆದ ವೈಶಿಷ್ಟತೆಯಿಂದ ಕರ್ನಾಟಕಕ್ಕೆ ಇನ್ನಷ್ಟೂ ಮೆರಗನ್ನು ನೀಡಿದೆ. ಭಾರತದ ಸ್ವಚ್ಚವಾದ ನಗರಗಳಲ್ಲಿ ಒಂದಾದ ಮಂಗಳೂರು ಮಹೋನ್ನತ ವ್ಯಾಪಾರ ಕೇಂದ್ರವಾಗಿದೆ ಮತ್ತು ಅದ್ಭುತವಾದ ಬೀಚ್, ಬಂದರು, ವೈವಿದ್ಯಮಯವಾದ ಸಂಸ್ಕೃತಿಗೆ ಹೆಸರುವಾಸಿಯಾಗಿದೆ.

 

ಮಂಗಳೂರು ನಗರವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದ್ದು, ಪ್ರವಾಸಿಗರು ಮೆಚ್ಚುವಂತಹ ಬಂದರು ಪ್ರದೇಶಗಳು, ಕಡಲ ತೀರ, ನೈಸರ್ಗಿಕ ಸೌಂದರ್ಯ ಮತ್ತು ಪ್ರಾಚೀನ ದೇವಾಲಯಗಳು ಹಾಗು ಆಹಾರ ಪದ್ಧತಿಯಾಗಿದೆ. ಎರಡು ದಿನಗಳ ಒಳಗಾಗಿ ನೋಡಬಹುದಾದ ಮಂಗಳೂರಿನ ಸುಂದರ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

1.ಪಿಲಿಕುಳ ನಿಸರ್ಗಧಾಮ
350 ಎಕರೆಗಳಲ್ಲಿ ಹರಡಿರುವ ಪಿಲಿಕುಳ ನಿಸರ್ಗಧಾಮವು ಪ್ರವಾಸಿಗರು ಆನಂದಿಸಬಹುದಾದ ಹಲವಾರು ಚಟುವಟಿಕೆಗಳನ್ನು ಹೊಂದಿದೆ. ಸಸ್ಯೋದ್ಯಾನ, ಔಷಧೀಯ ಉದ್ಯಾನ, ಗುತ್ತು ಮನೆ, ಕುಂಬಾರಿಕೆ, ಕೈಮಗ್ಗ, ಕಮ್ಮಾರ, ನರ್ಸರಿ ಮತ್ತು ಜಾನಪದ ಗ್ಯಾಲರಿ ಪಿಲಿಕುಳ ನಿಸರ್ಗಧಾಮದ ಕೆಲವು ಪ್ರಮುಖ ಆಕರ್ಷಣೆಗಳಾಗಿವೆ.
ಜೊತೆಗೆ ಮೃಗಾಲಯ, ಪಾರಂಪರಿಕ ಗ್ರಾಮ, ಕೆರೆ, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವಿಸ್ತಾರವಾದ ಗಾಲ್ಫ್ ಕೋರ್ಸ್ ಕೂಡ ಇದೆ.

ಇಲ್ಲಿ ನೀವು ನೃತ್ಯ ಪ್ರಕಾರಗಳು, ಸಾಂಪ್ರದಾಯಿಕ ಉಡುಪುಗಳು ಮತ್ತು ಇತರ ಜಾನಪದ ಕಲೆಗಳು ಮತ್ತು ಕಂಬಳ, ಯಕ್ಷಗಾನ ಮುಂತಾದ ಜಾನಪದ ಕ್ರೀಡೆಗಳನ್ನು ಸಹ ನೋಡಬಹುದು. ಈ ಪ್ರದೇಶದ ಸಂಪ್ರದಾಯ, ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಸಂದರ್ಶಕರಿಗೆ ಶಿಕ್ಷಣ ನೀಡಲು ಬೃಹತ್ ಗುತ್ತು ಮನೆಯನ್ನು ಪುನಃಸ್ಥಾಪಿಸಲಾಗಿದೆ.ಕುಟುಂಬದವರನ್ನು ಒಂದು ದಿನದ ವಿಹಾರಕ್ಕೆ ಅಥವಾ ಪಿಕ್ನಿಕ್‌ಗೆ ಕರೆದೊಯ್ಯಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

2.ಸುಲ್ತಾನ್ ಬತ್ತೇರಿ
ಸುಲ್ತಾನ್ ಬತ್ತೇರಿಯು ಐತಿಹಾಸಿಕ ಸ್ಥಳಗಳ ಬಗ್ಗೆ ಆಸಕ್ತಿ ಇರುವವರಿಗೆ ಭೇಟಿ ನೀಡಲು ಇದು ಸೂಕ್ತ ಸ್ಥಳವಾಗಿದೆ. ಅರೇಬಿಯನ್ ಸಮುದ್ರದ ಮೂಲಕ ಆಕ್ರಮಣ ಮಾಡುವ ಹಡಗುಗಳ ಮೇಲೆ ಕಣ್ಣಿಡಲು ಟಿಪ್ಪು ಸುಲ್ತಾನ್ ಕಪ್ಪು ಕಲ್ಲಿನಿಂದ ಕಾವಲುಗೋಪುರವನ್ನು ನಿರ್ಮಿಸಿದ್ದ ಎಎನ್ನಲಾಗುತ್ತದೆ. ಅವರು ಭೂಗತ ಕೋಣೆಗಳಲ್ಲಿ ಫಿರಂಗಿಗಳನ್ನು ಮತ್ತು ಗನ್‌ಪೌಡರ್‌ಗಳನ್ನು ಸಂಗ್ರಹ ಮಾಡುತ್ತಿದ್ದರು. ಆದರೆ, ಬ್ರಿಟಿಷರು ಅದನ್ನು ವಶಪಡಿಸಿ ನೌಕಾ ಕಚೇರಿಯನ್ನಾಗಿ ಮಾಡಿದರು ಎಂಬ ಇತಿಹಾಸವಿದೆ

3.ಮಂಗಳಾದೇವಿ ದೇವಾಲಯ
ಮಂಗಳಾದೇವಿ ದೇವಾಲಯವು ದುರ್ಗಾ ದೇವಿಯ ವಿವಿಧ ರೂಪಗಳಲ್ಲಿ ಒಂದಾಗಿದೆ. ಮಂಗಳಾ ದೇವಿಯ ದೇವಾಲಯವನ್ನು 9 ನೇ ಶತಮಾನದಲ್ಲಿನ ಅರಸ ಕುಂದವರ್ಮನ ಕಾಲದಲ್ಲಿ ಪ್ರತಿಷ್ಟಾಪನೆಗೊಂಡಿದ್ದು, ವಿಜಯ ದಶಮಿಯ ದಿನದಂದೂ ಒಂಬತ್ತು ದಿನವೂ ವಿಧ ವಿಧವಾದ ಅಲಂಕಾರದಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಪ್ರಸ್ತುತ ಮಂಗಳೂರಿನಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು, ಮಂಗಳಾದೇವಿ ದೇವಾಲಯದಿಂದಾಗಿ ಮಂಗಳೂರಿಗೆ ಮಂಗಳೂರು ಎಂಬ ಹೆಸರು ಬಂತು ಎಂದು ಕೂಡ ಹೇಳಲಾಗುತ್ತದೆ.

4.ಜಮಾಲಾಬಾದ್ ಕೋಟೆ
ಜಮಾಲಾಬಾದ್ ಕೋಟೆಯು ಟ್ರೆಕ್ಕಿಂಗ್ ಇಷ್ಟಪಡುವವರಿಗೆ ಒಂದು ಉತ್ತಮ ತಾಣವಾಗಿದೆ. ಮಂಗಳೂರಿನಿಂದ 65 ಕಿಲೋಮೀಟರ್ ದೂರದಲ್ಲಿದ್ದು, ಇಲ್ಲಿನ ಹಾದಿಗಳು ಕಿರಿದಾಗಿದ್ದು, ತುದಿಯನ್ನು ತಲುಪಿದೊಡನೆ ಕೆಲವು ಐತಿಹಾಸಿಕ ಅದ್ಭುತ ನೋಟಗಳನ್ನು ಕಾಣಬಹುದಾಗಿದೆ.

5.ಪಣಂಬೂರು ಬೀಚ್
ಹೊಸ ಮಂಗಳೂರು ಬಂದರಿನ ಸ್ಥಳವಾದ ಪಣಂಬೂರು
ಬೀಚ್ ಮಂಗಳೂರಿನಿಂದ ಕೇವಲ 13 ಕಿ,ಮೀ ದೂರದಲ್ಲಿದೆ. ಮಂಗಳೂರು ಎಂದರೆ ಬೀಚ್‍ಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅವುಗಳಲ್ಲಿ ವಿರಳವಾದ ಕ್ಕಿಕ್ಕಿರಿದ ಕಡಲ ತೀರಗಳಲ್ಲಿ ಈ ಬೀಚ್ ಕೂಡ ಒಂದಾಗಿದೆ. ಏಕಾಂತವಾಗಿ ಈಜು ಮಾಡಲು, ವಿಶ್ರಾಂತಿ ಪಡೆಯಲು, ರಿಫ್ರೆಶ್ ಆಗಲು ಉತ್ತಮವಾದ ಬೀಚ್ ಇದಾಗಿದೆ. ಪಣಂಬೂರು ಬೀಚ್ ಸುರಕ್ಷಿತವಾದ ಮತ್ತು ಅತ್ಯುತ್ತಮ ನಿರ್ವಹಣೆಯ ಕಡಲ ತೀರವಾಗಿದೆ. ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೆಚ್ಚು ಜನಪ್ರಿಯವಾಗಿರುವ ಮಂಗಳೂರಿನ ಈ ಪಣಂಬೂರು ಬೀಚ್ ಭೇಟಿ ನೀಡಬಹುದಾದ ಒಂದೊಳ್ಳೆ ಸ್ಥಳವಾಗಿದೆ. ಈ ಬೀಚ್ ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

6.ನವ ಮಂಗಳೂರು ಬಂದರು:
ಇದು ದೇಶದ 7ನೇ ಅತಿದೊಡ್ಡ ಬಂದರು ಮತ್ತು ಕರ್ನಾಟಕದ ಏಕೈಕ ಪ್ರಮುಖ ಬಂದರು. ಈ ಬಂದರಿನಲ್ಲಿ ಕಬ್ಬಿಣದ ಅದಿರು, ಗ್ರಾನೈಟ್, ಮ್ಯಾಂಗನೀಸ್ ಮುಂತಾದ ಖನಿಜಗಳನ್ನು ಮುಖ್ಯವಾಗಿ ರಫ್ತು ಮಾಡುವ ದೊಡ್ಡ, ದೊಡ್ಡ ಹಡಗುಗಳನ್ನು ಇಲ್ಲಿ ಕಾಣಬಹುದಾಗಿದೆ.

  1. ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ

1912, ಶ್ರೀ ನಾರಾಯಣ ಗುರುಗಳು ಬಿಲ್ಲವ ಸಮುದಾಯಕ್ಕಾಗಿ ಈ ದೇವಾಲಯವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಈ ದೇವಾಲಯವು ಬೃಹತ್ತಾಗಿದ್ದು, ಸುತ್ತಲೂ ಅಮೃತಶಿಲೆಯ ಗೋಡೆಗಳು ಮತ್ತು ಮಹಡಿಗಳು ಮತ್ತು ಸಂಪೂರ್ಣ ಸುಸಜ್ಜಿತ ವೈವಾಹಿಕ ಸ್ಥಳಗಳನ್ನು ಒಳಗೊಂಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಬಹುದಾಗಿದೆ.

Leave A Reply

Your email address will not be published.