ಮಾಡಾವು: ಇಬ್ಬರು ಹೆಣ್ಮಕ್ಕಳೊಂದಿಗೆ ಮನೆಯಿಲ್ಲದೆ ಸಂಕಷ್ಟ ಪಡುತ್ತಿದ್ದ ಮಹಿಳೆಯ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ | ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ ಅಭಿನವ ಭಾರತ ಮಿತ್ರ ಮಂಡಳಿ
ಪುತ್ತೂರು: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಮಾರು ವರುಷಗಳಿಂದ ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಮಹಿಳೆಗೆ ಮನೆ ನಿರ್ಮಾಣ ಮಾಡಿ ಕೊಡಲು ‘ಅಭಿನವ ಭಾರತ ಮಿತ್ರಮಂಡಳಿ’ಯವರು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನೂತನ ಮನೆಗೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.
ಶ್ರೀಕೃಷ್ಣ ಉಪಾಧ್ಯಾಯ ಅವರು ಗುದ್ದಲಿ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಕಿಂಗ್ ಕಾರ್ಯವನ್ನು ನೆರವೇರಿಸಿ ಕೊಟ್ಟರು. ಈ ವೇಳೆ ಶರತ್ ಕುಮಾರ್ ಮಾಡಾವು ಅವರು 5000 ರೂ. ಸಹಾಯಧನದ ಚೆಕ್ ಅನ್ನು ಕುಸುಮಾವತಿಯವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ದಿನೇಶ್ ಜೈನ್, ಧನ್ಯಕುಮಾರ್ ಬೆಳಂದೂರು, ಪಿಜಿ ಜಗನ್ನಿವಾಸ್ ರಾವ್, ವಿಶ್ವ ಹಿಂದೂ ಪರಿಷದ್ ಕೆಯ್ಯೂರು ಘಟಕದ ಅಧ್ಯಕ್ಷರಾದ ಚರಣ್, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಮೀನಾಕ್ಷಿ ಮೊದಲಾವರು ಉಪಸ್ಥಿತರಿದ್ದರು.
ಕೆಯ್ಯೂರು ಗ್ರಾಮದ ಮಾಡಾವು ಪರ್ತ್ಯಡ್ಕ ನಿವಾಸಿ ದಿ. ವಸಂತ ಎಂಬವರ ಪತ್ನಿ ಸುಮಾವತಿ (38) ಎಂಬವರು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಗಡು ಶೀಟ್ ಹಾಕಿದ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿರುವ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದು, ಮನೆಯಿಲ್ಲದೆ ತೀರಾ ಸಂಕಷ್ಟ ಪಡುತ್ತಿದ್ದು, ಇವರ ಸಂಕಷ್ಟ ಅರಿತ ‘ಅಭಿನವ ಭಾರತ ಮಿತ್ರಮಂಡಳಿ’ಯವರು ಮಹಿಳೆಗೆ ಮನೆ ನಿರ್ಮಾಣ ಮಾಡಿ ಕೊಡಲು ಮುಂದಾಗಿದ್ದು, ಶಾಸಕ ಸಂಜೀವ ಮಠಂದೂರು ಮುಖಾಂತರ ಸರ್ಕಾರದಿಂದ ಬರುವ ಅನುದಾನ ಬಳಸಿ ಮನೆ ಕಟ್ಟಿ ಕೊಡುವ ಭರವಸೆಯನ್ನು ನೀಡಿದ್ದಾರೆ.