ಕಾಂತಾರ ಪಂಜುರ್ಲಿ ದೈವದ ರೀಲ್ಸ್-ತೀವ್ರ ಆಕ್ರೋಶ !! ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆ ಯಾಚಿಸಿದ ಶ್ವೇತಾ ರೆಡ್ಡಿ!!

ಮಂಗಳೂರು: ತುಳುನಾಡಿನ ದೈವದ ಮಹಿಮೆ ಹಾಗೂ ಕಾರ್ಣಿಕವನ್ನು ಜಗತ್ತಿನೆಲ್ಲೆಡೆ ಪಸರಿಸಿದ ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವದ ರೀಲ್ಸ್ ಮಾಡಿ ಆಕ್ರೋಶಕ್ಕೆ ಕಾರಣವಾಗಿದ್ದ ಯುವತಿ ಶ್ವೇತಾ ರೆಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ತಪ್ಪು ಕಾಣಿಕೆ ಹಾಕುವ ಮೂಲಕ ಕ್ಷಮೆ ಯಾಚಿಸಿದ್ದಾರೆ.

 

ವೃತಿಯಲ್ಲಿ ಮೇಕ್ ಅಪ್ ಆರ್ಟಿಸ್ಟ್ ಆಗಿರುವ ಶ್ವೇತಾ ಕಾಂತಾರ ಸಿನಿಮಾ ನೋಡಿದ ಬಳಿಕ ದೈವದ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ ತುಳುವರು, ಕೂಡಲೇ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಇದಾದ ಕೆಲ ಹೊತ್ತಿನಲ್ಲೇ ಪೋಸ್ಟ್ ಡಿಲೀಟ್ ಮಾಡಲಾಗಿದ್ದು, ಆದರೂ ತುಳುನಾಡಿನ ದೈವ ನಂಬಿಕೆಯ ಬಗ್ಗೆ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸಿದ್ದರಿಂದ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದ್ದು, ಆಕೆಯ ವಿರುದ್ಧ ಇನ್ನಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಶ್ವೇತಾ ಧರ್ಮಸ್ಥಳ ದೇವಾಲಯಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿ ಕ್ಷಮೆ ಕೋರಿದ್ದು,ಮುಂದೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ.

Leave A Reply

Your email address will not be published.