ಚಾಲಕನ ನಿರ್ಲಕ್ಷ್ಯ : ಬಸ್ ನಡಿಗೆ ಬಿದ್ದು ಖಾಸಗಿ ಕಂಪನಿ ಉದ್ಯೋಗಿ ಸಾವು!!!
ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಖಾಸಗಿ ಕಂಪನಿ ಉದ್ಯೋಗಿಯೋರ್ವರು ದಾರುಣವಾಗಿ ಮೃತಪಟ್ಟಿದ್ದಾರೆ.
ಅ.10 ರಂದು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹತ್ತುವ ವೇಳೆ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಶ್ರೀ ಎಂಬ ವಿದ್ಯಾರ್ಥಿನಿ ಕೆಳಗೆ ಬಿದ್ದು, ಅವರ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಮತ್ತೋರ್ವ ಬಲಿಯಾಗಿದ್ದಾರೆ. ಹೊರವರ್ತುಲ ರಸ್ತೆಯಲ್ಲಿ ಲಗ್ಗೆರೆ ಬಳಿ ಬುಧವಾರ ರಾತ್ರಿ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಕಂಪೆನಿ ಉದ್ಯೋಗಿ ಪ್ರಮೋದ್ ಕುಮಾರ್ (24) ಎಂಬವರು ಮೃತಪಟ್ಟಿದ್ದಾರೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ನಿವಾಸಿಯಾದ ಪ್ರಮೋದ್, ಕೆಲ ವರ್ಷಗಳಿಂದ ಸೋದರ ಸಂಬಂಧಿ ಜತೆ ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಖಾಸಗಿ ಕಂಪೆನಿಯಲ್ಲಿಎಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿದ್ದ ಪ್ರಮೋದ್ ಬುಧವಾರ ರಾತ್ರಿ 10.10 ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಚೌಡೇಶ್ವರಿ ನಗರದ ಹೊರವರ್ತುಲ ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಪ್ರಮೋದ್ ಅವರಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಪ್ರಮೋದ್ ಕೆಳಗೆ ಬಿದ್ದಿದ್ದಾರೆ. ಆಗ ಅವರ ಮೇಲೆ ಬಸ್ ಚಕ್ರ ಹರಿದಿದೆ. ಸ್ಥಳೀಯರು ಹಾಗೂ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಕೂಡಲೇ ಗಾಯಾಳು ಪ್ರಮೋದ್ ಅವರನ್ನು ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ದಾಖಲಿಸಿದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂದಿದ್ದಾರೆ. ಅಪಘಾತಕ್ಕೆ ಕಾರಣವಾದ ಬಸ್ ಜಪ್ತಿ ಮಾಡಿದ್ದು, ಆರೋಪಿ ಚಾಲಕ ಹಾಸೀಮ್ ಸಾಬ್ (44)ನನ್ನು ಬಂಧಿಸಿದ್ದಾರೆ.
ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಪ್ರಕರಣದ ತನಿಖೆ ಮುಂದುವರಿಸಲಾಗಿದೆ. ಪ್ರಮೋದ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಪಘಾತದ ಸ್ಥಳದಲ್ಲಿ ಸ್ಥಳೀಯರು ಬಿಎಂಟಿಸಿ ಬಸ್‌ಗೆ ಕಲ್ಲುಹೊಡೆದು ಚಾಲಕನಿಗೂ ಥಳಿಸಿದ್ದಾರೆ. ಉದ್ರಿಕ್ತ ಜನರ ಗುಂಪು ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಹಾಕಿದೆ. ಚಾಲಕನ ಮೇಲೂ ಹಲ್ಲೆ ನಡೆಸಿದೆ. ಆದರೆ, ಘಟನೆ ನಡೆದ ಸ್ವಲ್ಪ ಸಮಯದಲ್ಲಿಯೇ ಪೊಲೀಸರು ಸ್ಥಳಕ್ಕೆ ಹೋಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಚಾಲಕನ ಮೇಲಿನ ಹಲ್ಲೆಗೆ ಸಂಬಂಧಿಸಿದ ಯಾವುದೇ ದೂರು ದಾಖಲಾಗಿಲ್ಲಎಂದು ಅಧಿಕಾರಿ ಹೇಳಿದರು.