ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕೆ ಕ್ರಮ- ಆರ್ ಅಶೋಕ್
ಮಂಗಳವಾರ ನಗರದ ಪೊಲೀಸ್ (Police) ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಕಂದಾಯ ಸಚಿವ ಆರ್ ಅಶೋಕ್ ಅವರು, “ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ (ಬಗರ್ ಹುಕುಂ) ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿರುವುದನ್ನು ತಪ್ಪಿಸಲು ಹಾಗೂ ಈಗಾಗಲೇ ಮೊಕದ್ದಮೆ ದಾಖಲಿಸಿರುವುದನ್ನು ರದ್ದುಪಡಿಸಲು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ-2011ಕ್ಕೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯ ಸಕ್ರಮೀಕರಣಕ್ಕೆ ನಮೂನೆ- 57ರಡಿ ಅರ್ಜಿ ಸಲ್ಲಿಕೆಗೆ ಒಂದು ವರ್ಷ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ನುಡಿದರು.
ರೈತರು (Farmers ) ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ (Market) ಸೌಲಭ್ಯ ರೂಪಿಸಿಕೊಳ್ಳಲು, ಮಧ್ಯ ವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಬ್ರಾಂಡಿಂಗ್ ಮಾಡುವ ಪ್ರಮುಖ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಒಟ್ಟು 25 ರೈತ ಉತ್ಪಾದಕರ ಸಂಸ್ಥೆಗಳನ್ನು ರಚನೆ ಮತ್ತು ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.