ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಒಂದು ಶನಿವಾರ ‘ಸಂಭ್ರಮ ಶನಿವಾರ’!!
ಶಾಲಾ ಮಕ್ಕಳಿಗೆ ಹೆಚ್ಚಿನ ಹೊರೆ ಆಗುತ್ತಿರುವುದು ಬ್ಯಾಗ್ ನಿಂದಾಗಿ. ವಿದ್ಯಾರ್ಥಿಗಳ ತೂಕಕ್ಕಿಂತಲೂ ಹೆಚ್ಚು ಸ್ಕೂಲ್ ಬ್ಯಾಗ್ ಭಾರ ಇರುತ್ತದೆ. ಈ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿ, ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಘೋಷಿಸಿತ್ತು.
ಇದೀಗ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಈ ಕುರಿತಂತೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಸುತ್ತೋಲೆಯ ಪ್ರಕಾರ, ಶಾಲೆಗಳಲ್ಲಿ ಪ್ರತಿ ತಿಂಗಳ ಒಂದು ಶನಿವಾರದಂದು ಸಂಭ್ರಮ ಶನಿವಾರ ಆಚರಣೆಯಾಗಿರುತ್ತದೆ.
“ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಸಂಭ್ರಮ ಶನಿವಾರ – ಬ್ಯಾಗ್ ರಹಿತ ದಿನವನ್ನು ಆಚರಿಸಲು ಸೂಚಿಸಲಾಗಿದೆ”ಎಂದು ನಿರ್ದೇಶಕರು ತಿಳಿಸಿದ್ದಾರೆ. ಬ್ಯಾಗ್ ರಹಿತ ದಿನದ ಆಚರಣೆ ಸಂಬಂಧ ಶಾಲಾ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಿದೆ.
ಬ್ಯಾಗ್ ರಹಿತ ದಿದಂದು ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ವಿವಿಧ 10 ವಿಷಯಗಳಲ್ಲಿ ಸ್ವಯಂ ವಿವರಣಾತ್ಮಕ ಚಿತ್ರ ಸಹಿತ ಚಟುವಟಿಕೆ ಪುಸ್ತಕಗಳನ್ನು ಹಾಗೂ ಅವುಗಳನ್ನು ತರಗತಿಗಳಲ್ಲಿ ನಿರ್ವಹಿಸಲು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ ಎಂದಿದ್ದಾರೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಲ್ಲಾ ಶಿಕ್ಷಕರು ಕೈಪಿಡಿಯನ್ನು DSERT ವೆಬ್ ಸೈಟ್ https://dsert.kar.nic.in ಜಾಲತಾಣಕ್ಕೆ ಭೇಟಿ ನೀಡಿ, ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಒಟ್ಟಾರೆ, ಈ ಮೂಲಕ ಮಕ್ಕಳಿಗೆ ಒಂದು ದಿನವಾದರೂ ಬ್ಯಾಗ್ ಹೊರೆ ತಪ್ಪಲಿದೆ.