ದಲಿತ ಮಹಿಳೆಯ ಮಾನಭಂಗ ಯತ್ನ : ವಿರೋಧ ಪಕ್ಷಗಳು ಆರೋಪಿಗಳ ಪರ ನಿಲ್ಲುವುದನ್ನು ನಿಲ್ಲಿಸಬೇಕು, ಬಿಜೆಪಿ ಆಗ್ರಹ
ಕಡಬ : ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಡಿನ ಬಳಿ ಇರುವ ದೈವನರ್ತಕ ಸಮುದಾಯದ ಒಂಟಿ ಮನೆಗೆ ಬಂದು ಮಹಿಳೆಯೋರ್ವಳೆ ಇರುವುದನ್ನು ಗಮನಿಸಿ, ಹಣ ಇಲ್ಲದಿದ್ದರೂ ಪರವಾಗಿಲ್ಲ ಬಟ್ಟೆ ಕೊಡ್ತವೆ, ನಮ್ಮೊಂದಿಗೆ ಮಲಗಿ ಸಹಕರಿಸಿದರೆ ಸಾಕು ಎಂದು ವ್ಯಾಪಾರಿ ದುಷ್ಕರ್ಮಿಗಳು ಹೇಳಿದ್ದಲ್ಲದೇ, ಮಹಿಳೆ ಒಪ್ಪದಿದ್ದಾಗ ದುಡ್ಡಿನ ಆಮಿಷವೊಡ್ಡಿದಾಗಲೂ ಮಹಿಳೆ ಒಪ್ಪದಿದ್ದಾಗ ಆಕೆಯ ಮೈಮೇಲೆ ಕೈಹಾಕಿ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದರು.
ಪ್ರಕರಣ ನಡೆದಾಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದನ್ನು ಗಮನಿಸಿದ ದಾರಿಯಲ್ಲಿ ಹೋಗುತ್ತಿದ್ದ ಊರಿನ ಮಹಿಳೆಯೊಬ್ಬರು ಬಂದು ಅವರೂ ಬೊಬ್ಬೆಹೊಡೆದಾಗ ದುಷ್ಕರ್ಮಿಗಳಿಬ್ಬರು ತಾವು ಬಂದ ಕಾರಿನಲ್ಲಿ ಪರಾರಿಯಾಗುತ್ತಾರೆ. ವಿಷಯ ತಿಳಿದ ಊರವರು ಬೆನ್ನಟ್ಟಿದಾಗ ಆರೋಪಿಗಳ ಕಾರು ೨ ಬೈಕ್ ಮತ್ತು ೧ ಜೀಪಿಗೆ ಡಿಕ್ಕಿ ಹೊಡೆದು ಕಾರು ಕಾಣಿಯೂರು ಬಳಿ ಪಲ್ಟಿಯಾಗಿತ್ತು. ಆದರೆ ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ ಸೇರಿದಂತೆ ಕೆಲವು ಸಂಘಟನೆಗಳು ಈ ಘಟನೆಯನ್ನು ರಾಜಕೀಯಗೊಳಿಸಿ ದಲಿತ ಮಹಿಳೆಯ ಅತ್ಯಾಚಾರ ಯತ್ನವನ್ನು ತಿರುಚಿ ದುಷ್ಕರ್ಮಿಗಳನ್ನು ಬೆಂಬಲಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ.
ದುಷ್ಕರ್ಮಿಗಳು ಪರಾರಿಯಾಗುವ ಪ್ರಯತ್ನದಲ್ಲಿ ಕಾರು ಅಪಘಾತಕ್ಕೀಡಾದ ಮೇಲೆ ಬೆನ್ನಟ್ಟಿದವರು ಸಹಜವಾಗಿ ಅರೋಪಿಗಳನ್ನು ಅವರ ದುಷ್ಕೃತ್ಯದ ಬಗ್ಗೆ ಪ್ರಶ್ನಿಸಿದ ಘಟನೆಯೂ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ೩-೪ ಹೊದಿಕೆಗಳು ಮಾತ್ರ ಕಂಡು ಬಂದಿದ್ದು ಅವರು ವ್ಯಾಪಾರದ ಉದ್ದೇಶದಿಂದ ಬಂದವರಲ್ಲ ಎಂದು ಸ್ಪಷ್ಟವಾಗಿತ್ತು. ಇದರಿಂದ ಸಂಶಯ ಗೊಂಡು ಬಳಿಕ ಪ್ರಶ್ನಿಸಿದಾಗ ಅವರು ತಪ್ಪೊಪ್ಪಿಕೊಂಡು ಕೊಂಡು ತಮ್ಮ ಹೆಸರು ಹೇಳಿ ಕ್ಷಮಿಸುವಂತೆ ಬೇಡಿಕೊಂಡ ಘಟನೆಯೂ ನಡೆದಿದೆ.
ಆರೋಪಿಗಳನ್ನು ಬೆನ್ನಟ್ಟಿದ್ದು ಕಾರು ಪಲ್ಟಿಯಾದ ಮೇಲೆ ಊರವರು ಪ್ರಶ್ನಿಸಿದ್ದು ಅವರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳೆಂದು ಹೊರತು ಅವರು ಮುಸ್ಲಿಮರೆಂದಲ್ಲ. ಅವರು ಮುಸ್ಲಿಮರೆಂದು ಗೊತ್ತಾದದ್ದೇ ಊರವರು ವಿಚಾರಣೆ ನಡೆಸಿದ ಬಳಿಕ ಇಲ್ಲಿ ಜಾತಿ ಧರ್ಮವನ್ನೂ ಎಳೆದು ತಂದಿರುವುದು ಅತ್ಯಾಚಾರ ಪ್ರಕರಣ ಗಂಭೀರತೆಯನ್ನು ಕುಗ್ಗಿಸಲು ಎನ್ನುವುದು ಸ್ಪಷ್ಟವಾಗುತ್ತಿದೆ.
ಮಧ್ಯಾಹ್ನ ಗಂಟೆ ೨.೩೦ರ ವೇಳೆಗೆ ಘಟನೆ ಬಗ್ಗೆ ತಿಳಿದ ಕಾಣಿಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಉದನಡ್ಕ ಪೋಲಿಸರಿಗೆ ಮಾಹಿತಿ ನೀಡಿ ಘಟನೆ ಸ್ಥಳಕ್ಕೆ ತೆರಳಿರುತ್ತಾರೆ. ಕಾಂಗ್ರೆಸ್ಸಿಗರು, ಎಸ್.ಡಿ.ಪಿ.ಐ. ಮತ್ತಿತರ ಕೆಲವು ಸಂಘಟನೆಗಳು ಗಣೇಶ ಉದನಡ್ಕ ಅವರನ್ನು ಹಲ್ಲೆ ಪ್ರಕರಣ ಆರೋಪಿಯೆಂದು, ಬಂಧಿಸಬೇಕೆಂದು ಒತ್ತಾಯಿಸಿಸುವುದು ಕಂಡು ಬರುತ್ತಿದೆ. ದಲಿತ ಮಹಿಳೆಗಾದ ದೌರ್ಜನ್ಯವನ್ನು ಮರೆಮಾಚಿಸುವ ಮೂಲಕ ಕಾಂಗ್ರೇಸ್, ಎಸ್.ಡಿ.ಪಿ.ಐ ದಲಿತ ವಿರೋಧಿ ನಿಲುವನ್ನು ಪ್ರದರ್ಶಿಸಿರುವುದು ನಾಚಿಕೆಗೇಡು ಎಂದು ಹೇಳಿದ ರಾಕೇಶ್ ರೈ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ ಆರೋಪಿಗಳು ಕಾನೂನಿಕ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಅಗ್ರಹಿಸಿದರು.
ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್ ಮಾತನಾಡಿ ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣ ಖಂಡನೀಯ, ಶೀಘ್ರದಲ್ಲಿ ಎಸ್‌ಸಿ ಮೋರ್ಚಾದ ನಿಯೋಗವೊಂದು ಸಂತ್ರಸ್ತೆ ಮಹಿಳೆಯ ಮನೆಗೆ ತೆರಳಿ ಸಾಂತ್ವಾನ ಹೇಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭದಾ ಎಸ್,ರೈ, ಸುಳ್ಯಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಕಾಶ್ ಎನ್.ಕೆ ಉಪಸ್ಥಿತರಿದ್ದರು.
ವ್ಯಾಪಾರದ ಸೋಗಿನಲ್ಲಿ ಬಂದು ದಲಿತ ಮಹಿಳೆಯನ್ನು ಅತ್ಯಾಚರಕ್ಕೆ ಯತ್ನಿಸಿದ ಇಬ್ಬರೂ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ಜೈಲಿಗಟ್ಟಬೇಕೆಂದು ಸುಳ್ಯ ಬಿಜೆಪಿ ಸಮಿತಿ ಆಗ್ರಹಿಸುತ್ತದೆ.