ಕರಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದೆ ‘ಕೆಂಗಣ್ಣು ಕಾಯಿಲೆ’!!
ಕೊರೋನ ವೈರಸ್ ಸೋಂಕಿನಿಂದ ಸ್ವಲ್ಪ ಪಾರಾದ್ವಿ ಅನ್ನುವಷ್ಟರಲ್ಲಿ ಹೊಸ ಕಾಯಿಲೆಯೊಂದು ಕರಾವಳಿ ಜನತೆಗೆ ದೊಡ್ಡ ಆಘಾತ ತರಿಸಿದೆ. ಹೌದು. ಕೆಂಗಣ್ಣು ಕಾಯಿಲೆಯು ದಕ್ಷಿಣ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
‘ಮದ್ರಾಸ್ ಐ’ ಎಂದೂ ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ ಸೋಂಕು. ಕಣ್ಣಿನ ಬಿಳಿಭಾಗದ ಮೇಲ್ಮೆ ಮತ್ತು ಕಣ್ಣಿನರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಈ ರೋಗವಾಗಿದೆ.
ಮಂಗಳೂರಿನ ಕೆಲವು ಕಡೆಗಳಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು 10 ದಿನಗಳ ಹಿಂದೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡೀಲ್ ಪ್ರದೇಶದ ಹಲವಾರು ಮನೆಗಳ ಸದಸ್ಯರು ಈ ಕಾಯಿಲೆಗೆ ತುತ್ತಾಗಿದ್ದರು. ಪ್ರಸ್ತುತ ಸಮೀಪದ ಪೆರ್ಮುದೆ, ಎಕ್ಕಾರು ಗ್ರಾಮ ಪಂಚಾಯತ್, ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಗೂ ಹರಡಿದೆ.
ಇದು ಸುಲಭವಾಗಿ ಹರಡುವ ಸೋಂಕು ರೋಗವಾಗಿದ್ದು, ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಐ ಡ್ರಾಪ್‌ನಂತಹ ಔಷಧಗಳನ್ನು ವೈದ್ಯರು ಸೂಚಿಸುತ್ತಾರೆ. ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವಾಗ ಕಣ್ಣುಗಳನ್ನು ಮುಟ್ಟಿ ಕೊಳ್ಳದಿರುವುದು, ಆಗಾಗ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳುವುದು, ರೋಗಪೀಡಿತರ ಸಂಪರ್ಕದಿಂದ ದೂರ ಇರುವ ಮೂಲಕ ಕೆಂಗಣ್ಣು ಸೋಂಕು ಪ್ರಸರಣ ತಪ್ಪಿಸಬಹುದು.