ಅಲೇ ಬುಡಿಯೆರ್… ಪಿಲಿಕುಳದಲ್ಲಿ ಕಿವಿಯ ತಮಟೆಗೆ ಬಡಿಯಲಿದೆ ಕಹಳೆ!! ನಾಲ್ಕು ವರ್ಷಗಳಿಂದ ನಿಂತುಹೋಗಿದ್ದ ಕಂಬಳ ಆರಂಭಕ್ಕೆ ದಿನಗಣನೆ!!

ಮಂಗಳೂರು: ನಗರದ ಹೊರವಲಯದ ವಾಮಂಜೂರು ಬಳಿಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಳೆದ ಹಲವು ವರ್ಷಗಳಿಂದ ನಿಂತುಹೋಗಿದ್ದ ಕಂಬಳ ಕ್ರೀಡೆಯನ್ನು ಮತ್ತೊಮ್ಮೆ ಪ್ರಾರಂಭಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ದಿನ ನಿಗದಿಯಾಗುವಂತೆ ಆಯೋಜಿಸಲು ಯೋಜನೆ ರೂಪಿಸಲಾಗಿದೆ.

 

ಕಳೆದ ಕೆಲ ಸಮಯಗಳಿಂದ ಕಂಬಳ ನಿಂತುಹೋಗಿದ್ದ ಹಿನ್ನೆಲೆಯಲ್ಲಿ ಕಂಬಳ ಕರೆ ತೀರಾ ಹದಗೆಟ್ಟಿದೆ ಎನ್ನುವ ಕಾರಣಕ್ಕಾಗಿ ನವೆಂಬರ್ 12 ಕ್ಕೆ ನಡೆಸುವ ತಯಾರಿಯಲ್ಲಿದ್ದ ಸಮಿತಿಯು, ಕಂಬಳ ಕರೆ ಸಿದ್ಧಗೊಂಡ ಬಳಿಕ ನಡೆಸಲು ತೀರ್ಮಾನಿಸಿದೆ.

ಕೃಷಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಕೂಡುವಿಕೆಯೊಂದಿಗೆ ಕಂಬಳ ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ನಾಲ್ಕು ವರ್ಷಗಳಿಂದ ಪಾಳು ಬಿದ್ದಿದ್ದ ಕರೆಯ ಸುತ್ತ ಬೆಳೆದ ಗಿಡ ಗಂಟಿಗಳ ಕಟಾವು ಹಾಗೂ ಕರೆಯ ಮರು ನಿರ್ಮಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆ.ಅಂದಾಜು 30 ಲಕ್ಷ ವೆಚ್ಚದಲ್ಲಿ ಯೋಜನೆ ಹಾಕಲಾಗಿದ್ದು,ಕಂಬಳ ಪ್ರೇಮಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

2014 ರಲ್ಲಿ ಕೊನೆಯ ಬಾರಿ ಗುತ್ತಿನ ಮನೆಯ ಮುಂಭಾಗದಲ್ಲಿರುವ ನೇತ್ರಾವತಿ-ಫಲ್ಗುಣಿ ಜೋಡುಕರೆಯಲ್ಲಿ ಕಂಬಳ ನಡೆದಿದ್ದು, ಆ ಬಳಿಕ ಬಂದ ಕಾನೂನು ಹೋರಾಟಗಳ ಹಿನ್ನೆಲೆಯಲ್ಲಿ ಪಿಲಿಕುಳ ಕಂಬಳ ಸ್ಥಗಿತಗೊಂಡಿತ್ತು. ಸದ್ಯ ಕಾನೂನು ತಿದ್ದುಪಡಿಯಾಗಿದ್ದು,2018 ರಲ್ಲಿ ನಡೆಯಬೇಕಿದ್ದ ಕಂಬಳ ಅನುದಾನದ ಕೊರತೆಯಿಂದ ಹಿನ್ನಡೆಯಾಗಿತ್ತು.

ಆದರೆ ಈ ಬಾರಿ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಮೊಳಗದ ಕಹಳೆಯ ನಾದ ಈ ಬಾರಿ ಕಂಬಳಾಭಿಮಾನಿಗಳ ಕಿವಿಯ ತಮಟೆಗೆ ಜೋರಾಗಿ ಬಡಿಯಲಿದೆ ಎನ್ನುವ ಖುಷಿ ಹಾಗೂ ಉತ್ಸಾಹದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave A Reply

Your email address will not be published.