ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಗೊನೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆಯನ್ನೇ ಪುಡಿಮಾಡಿದ ‘ಕಾಂತಾರ’!

 

ಹೊಂಬಾಳೆಯಲ್ಲಿ ಅಕ್ಷರಶಃ ಚಿನ್ನದ ಗೊನೆಗಳು ಬೆಳೆದಿವೆ. ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲಂ ಕೈ ಹಾಕಿದ್ದು ಸ್ವರ್ಣ ರೂಪ ಪಡೆದುಕೊಳ್ಳುತ್ತಿದೆ….ಇದಕ್ಕೊಂದು ತಾಜಾ ಉದಾಹರಣೆ ಎಂದರೆ ‘ ಕಾಂತಾರ ‘ . ಈ ಹಿಂದೆ KGF ಚಿತ್ರ ಮಾಡಿ ಎನಿಸಿಕೊಳ್ಳಲಾಗದಷ್ಟು ದುಡ್ಡು ಬಾಚಿಕೊಂಡಿತ್ತು ಹೊಂಬಾಳೆ…ಇದೀಗ ಕಾಂತಾರ ಚಿತ್ರದಿಂದ ಎಣಿಕೆ ಮಾಡಲು ದಿನಗಳೇ ಬೇಕಾಗುವಷ್ಟು ಹಣ ನದಿಯ ಹಾಗೆ ಹರಿದು ಬರುತ್ತಿದೆ.

ಹೌದು, ಕಾಂತಾರ ಕೆಜಿಎಫ್ 1 ಮತ್ತು 2 ರ ಸಾಧನೆಯನ್ನೂ ಪುಡಿಗಟ್ಟಿದೆ. ಈಗ ಕೇವಲ 25 ದಿನಗಳಲ್ಲಿ 77 ಲಕ್ಷ ಜರರಿಂದ ಕಾಂತಾರ ವೀಕ್ಸಿಸಲ್ಪಟ್ಟಿದೆ. ಆ ಮೂಲಕ ಕೆಜಿಎಫ್ ನ ಎಪ್ಪತ್ತೆರಡು ಲಕ್ಷ ವೀಕ್ಷಣೆಯ ದಾಖಲೆ ಉಡೀಸ್ !

ಈವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಭರ್ಜರಿ ಸದ್ದುಮಾಡಿರುವ ‘ಕಾಂತಾರ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಾರಾಜಿಸುತ್ತಿದೆ. ಹೀಗೆ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಸಹ ಅಬ್ಬರಿಸುತ್ತಿದೆ.

ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಾಂತಾರ ಅಬ್ಬರ ಜೋರಾಗಿದೆ. ಚಿತ್ರ ಎಲ್ಲೆಡೆ ಉತ್ತಮ ಗಳಿಕೆ ಕಾಣುತ್ತಿದ್ದು, ಹಳೆಯ ದಾಖಲೆಗಳನ್ನು ಹೊಡೆದುರುಳಿಸಿದೆ. ಇನ್ನೂರು ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಕಾಂತಾರ ಚಿತ್ರ ಅಮೇರಿಕಾದಲ್ಲಿಯೂ ದೊಡ್ಡ ಕಲೆಕ್ಷನ್ ಮಾಡುತ್ತಿದೆ.

ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ 1 ರ ದಾಖಲೆ ಮುರಿದ ಕಾಂತಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಯುಎಸ್ ನೆಲದಲ್ಲಿ ನೆಲೆಗೊಂಡಿರುವ ಕನ್ನಡಿಗರು ಕಾಂತಾರ ಚಿತ್ರವನ್ನು ಪದೇಪದೇ ನೋಡುತ್ತಿದ್ದಾರೆ. ಹೀಗೆ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರುವ ಕಾಂತಾರ ಅಮೇರಿಕ ಗಲ್ಲಾಪೆಟ್ಟಿಗೆಯಲ್ಲಿ 1 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ಸುಮಾರು 8.2 ಕೋಟಿ ರೂಪಾಯಿಗಳನ್ನು ಕಾಂತಾರ ಅಮೆರಿಕಾದಲ್ಲಿ ಸಂಪಾದಿಸಿದೆ. ಈ ಮೂಲಕ ಕಾಂತಾರ ಕೆಜಿಎಫ್ ಚಾಪ್ಟರ್ 1 ರ ಗಳಿಕೆಯನ್ನು ಸಂಪೂರ್ಣವಾಗಿ ಹಿಂದಿಕ್ಕಿ , ಅದರ ದಾಖಲೆಯನ್ನು ಹೊಡೆದುರುಳಿಸಿದೆ .

ಕೆಜಿಎಫ್ 1 ಗಳಿಸಿದ್ದಾದರೂ ಎಷ್ಟು ?

ಯಶ್ ಅಭಿನಯದ , ಇದೇ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಕೆಜಿಎಫ್ ಚಾಪ್ಟರ್ 1 805637 ಡಾಲರ್ ಗಳಿಸಿತ್ತು. ಈವರೆಗೆ ಕಾಂತಾರ ಹತ್ತು ಲಕ್ಷ ಡಾಲರ್ ಗಳಿಸಿದೆ. ಇನ್ನೂ ಸಹ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಅಮೆರಿಕಾ ನೆಲದಲ್ಲಿ ಬಿಡುಗಡೆಯಾದ ನಂತರ ಕಲೆಕ್ಷನ್ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಸದ್ಯಕ್ಕೆ ಅಮೆರಿಕಾ ನೆಲದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪೈಕಿ ಕಾಂತಾರ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಅಮೆರಿಕಾದಲ್ಲಿ ಅತಿಹೆಚ್ಚು ಗಳಿಸಿದ ಟಾಪ್ 10 ಚಿತ್ರಗಳು

ಕೆಜಿಎಫ್ ಚಾಪ್ಟರ್ 2 : 7,418,131 ಡಾಲರ್

ಕಾಂತಾರ : 1 ಮಿಲಿಯನ್ ಡಾಲರ್

ಕೆಜಿಎಫ್ ಚಾಪ್ಟರ್ 1 : 805,637 ಡಾಲರ್

ರಂಗಿತರಂಗ : 315,098 ಡಾಲರ್

ಕಿರಿಕ್ ಪಾರ್ಟಿ : 270,568 ಡಾಲರ್

ವಿಕ್ರಾಂತ್ ರೋಣ : 182,091 777 ಡಾಲರ್

ಚಾರ್ಲಿ : 171,417 ಡಾಲರ್

ಗೋಧಿ ಬಣ್ಣ ಸಾಧಾರಣ ಮೈಕಟ್ಟು : 170,863 ಡಾಲರ್

ಜೇಮ್ಸ್ : 126,118 ಡಾಲರ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : 120,697 ಡಾಲರ್

ಇನ್ನು ಅಮೆರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ ಟಾಪ್ 10 ಪಟ್ಟಿಯ ಮೊದಲ 3 ಸ್ಥಾನಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳೇ ಪಡೆದುಕೊಂಡಿವೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿಯುವುದು ಕಠಿಣವೇ ಸರಿ. ಆದರೂ ಈ ದಾಖಲೆಯನ್ನು ಕಾಂತಾರ ಸಿನಿಮಾ ಮುರಿದಿದೆ. ಈ ದಾಖಲೆಗಳನ್ನು ನೋಡಿದರೆ ಹೊಂಬಾಳೆಯಲ್ಲಿ ಚಿನ್ನದ ಗೊನೆಗಳು ಬೆಳೆದಿವೆ ಎಂದರೆ ತಪ್ಪಾಗಲಾರದು.

Leave A Reply

Your email address will not be published.